ಹಳೇ ಪಿ.ಬಿ.ರಸ್ತೆಗೆ ಚನ್ನಯ್ಯ ಒಡೆಯರ್ ಹೆಸರಿಡಲು ಆಗ್ರಹ

ಹಳೇ ಪಿ.ಬಿ.ರಸ್ತೆಗೆ ಚನ್ನಯ್ಯ ಒಡೆಯರ್ ಹೆಸರಿಡಲು ಆಗ್ರಹ

ದಾವಣಗೆರೆ, ನ.5- ನಗರದ ಹಳೇ ಪಿ.ಬಿ. ರಸ್ತೆಗೆ ದಿ.ಚನ್ನಯ್ಯ ಒಡೆಯರ್  ಹಾಗೂ ಹೈಸ್ಕೂಲ್ ಮೈದಾನಕ್ಕೆ ಕೆ.ಮಲ್ಲಪ್ಪ ಅವರ ಹೆಸರು ನಾಮಾಂಕಿತ ಮಾಡುವಂತೆ ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ, ಜಿ.ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಚನ್ನಯ್ಯ ಒಡೆಯರ್  ಅವರು ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡು ದಾವಣಗೆರೆ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.

ಈ ಭಾಗದ ಹಿಂದುಳಿದ, ದಲಿತ, ಶೋಷಿತರ ಆಶಾಕಿರಣ ಚನ್ನಯ್ಯ ಒಡೆಯರ್ ಅವರ ಹೆಸರನ್ನು ಬಾಡಾ ಕ್ರಾಸ್‌ನಿಂದ ಜಿಎಂಐಟಿ (ಬಾತಿ ಕೆರೆವರೆಗೆ)ವರೆಗಿನ ಪಿ.ಬಿ. ರಸ್ತೆಗೆ ನಾಮಕರಣ ಮಾಡಿದಲ್ಲಿ ಇಂದಿನ ಯುವಕರಿಗೆ ಅದು ಪ್ರೇರಣೆಯಾಗುತ್ತದೆ. ಆದರೆ ಕಳೆದ ಮೂವತ್ತು ವರ್ಷಗಳಿಂದ ಅವರನ್ನು ಎಲ್ಲರೂ ಮರೆತೇಬಿಟ್ಟಿದ್ದಾರೆ ಎಂದರು.

ನಗರದ ಮಧ್ಯಭಾಗದಲ್ಲಿರುವ ಹೈಸ್ಕೂಲ್ ಮೈದಾನ, ಅಲ್ಲಿನ ಕುಸ್ತಿ ಅಖಾಡ ಅಥವಾ ಕ್ರೀಡಾಂಗಣಕ್ಕೆ ಹಿರಿಯ ಮುತ್ಸದ್ಧಿ ಕೆ.ಮಲ್ಲಪ್ಪ ಅವರ ಹೆಸರು ನಾಮಕರಣ ಮಾಡಬೇಕು. 

ಕೆ.ಮಲ್ಲಪ್ಪ ಅವರು ಕ್ರೀಡಾ ಕ್ಷೇತ್ರದಲ್ಲಿ ಯುವ ಕರನ್ನು ಪ್ರೇರೇಪಿಸುತ್ತಿದ್ದರು. ಬೀರೇಶ್ವರ ವ್ಯಾಯಾಮ ಶಾಲೆ ಸ್ಥಾಪಿಸಿ, ಗ್ರಾಮೀಣ ರೈತ ಮಕ್ಕಳು, ಶ್ರಮಿಕ ವರ್ಗದ ಮಕ್ಕಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇಂತಹ ಜಾತ್ಯತೀತ, ಪಕ್ಷಾತೀತ ಚೇತನಗಳನ್ನು ಹೆಸರುಗಳನ್ನು ಇದೇ 30ರ ಕನಕ ಜಯಂತಿಯಂದು ನಾಮಕರಣ ಮಾಡಬೇಕು. ಆ ಮೂಲಕ ಅವರ ಹೆಸರುಗಳು ಚಿರಸ್ಥಾಯಿಯಾಗಿ ಉಳಿಯಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ನಾಮಕರಣ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದರು.

ಗಡಿಗ್ರಾಮಗಳಲ್ಲಿ ನಡೆಸಿದ ಗ್ರಾಮ ವಾಸ್ತವ್ಯಗಳಲ್ಲಿ ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವುದು, ಮಳೆಯಿಂದಾಗಿ ಬಿದ್ದ ಮನೆಗಳಿಗೆ ಇಲ್ಲಿವರೆಗೆ ಪರಿಹಾರ ಸಿಗದಿರುವುದು, ಸ್ವಸಹಾಯ ಸಂಘಗಳು ನಿಷ್ಕ್ರಿಯಗೊಂಡು ಸೌಲಭ್ಯಗಳು ಸಿಗದಿರುವುದು, ಬಸ್‌ಗಳ ಸಂಪರ್ಕ ಇಲ್ಲದಿರುವುದು, ಬೆಳೆ ವಿಮೆ ಸಿಗದೇ ಇರುವುದೂ ಸೇರಿದಂತೆ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೆಲ ಸಮಸ್ಯೆಗಳ ಪರಿಹಾರದ ಬಗ್ಗೆ
ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆರ್ಥಿಕ ಸಂಕಷ್ಟದಲ್ಲಿರುವವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ ಎಂದು ವಿನಯ್ ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

error: Content is protected !!