ಕರ್ನಾಟಕ ನಾಮಕರಣದ ಐವತ್ತು ವರ್ಷಗಳ ನೆನಪಿನಲ್ಲಿ ವಿಶೇಷ ರಾಜ್ಯೋತ್ಸವ ಕಾರ್ಯಕ್ರಮ
ಸಿರಿಗೆರೆ, ನ.1- ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ನಾಡಿದ್ದು ದಿನಾಂಕ 3, 4 ಮತ್ತು 5ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಕನ್ನಡ ನುಡಿಹಬ್ಬ ಜರುಗಲಿದೆ.
ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಂಪರೆ, ಕವಿಗೋಷ್ಠಿ, ವಚನ ಸಾಹಿತ್ಯ ಗೋಷ್ಠಿ ಮತ್ತು `ಮರೆಯಲಾಗದ ಮಹನೀಯರು’ ಎಂಬ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಭಾಗವಹಿಸುವರು.
ನಾಡಿದ್ದು ದಿನಾಂಕ 3ರ ಶುಕ್ರವಾರ ಬೆಳಿಗ್ಗೆ 8ಕ್ಕೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯುತ್ತದೆ. ಆನಂತರ ಧ್ವಜಾರೋಹಣ ಮತ್ತು ಸಿರಿಗೆರೆಯ ವಿವಿಧ ಶಾಲಾ-ಕಾಲೇಜುಗಳ ಐದು ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ಕನ್ನಡ ಗೀತೆಗಳ ಗಾಯನ ನಡೆಯಲಿದೆ.
ರಾಜ್ಯೋತ್ಸವವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮೂಡ್ನಕೂಡು ಚಿನ್ನಸ್ವಾಮಿ ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ ನಾಡಿನ ಹೆಸರಾಂತ ಕಲಾ ತಂಡಗಳಿಂದ ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮಗಳಿರುತ್ತವೆ. ದಿನಾಂಕ 5ರ ಸಂಜೆ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ. ಜೆ. ಪಿ. ಕೃಷ್ಣೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ 2023ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು. ಪ್ರೊ. ಎಸ್.ಬಿ. ರಂಗನಾಥ್, ಡಾ. ವಾಮದೇವಪ್ಪ, ಬಿ. ವಾಮದೇವಪ್ಪ, ಕೆ. ಶಿವಸ್ವಾಮಿ, ಸೂರಿ ಶ್ರೀನಿವಾಸ್, ಕೆ.ಎಸ್. ಸಿದ್ಧಲಿಂಗಪ್ಪ, ಡಿ. ಮಂಜುನಾಥ್ ಮತ್ತಿತರರು ಭಾಗವಹಿಸಲಿದ್ದಾರೆ.
ದಿನಾಂಕ 3 ರ ಶುಕ್ರವಾರ 10.30ಕ್ಕೆ ಕನ್ನಡ ಸಾಹಿತ್ಯ ಮತ್ತು ಪರಂಪರೆಯ ಗೋಷ್ಠಿಯಲ್ಲಿ `ಕನ್ನಡ ಪ್ರಾಚೀನ ಸಾಹಿತ್ಯ ಸಿರಿ’ ಎಂಬ ವಿಷಯದ ಬಗ್ಗೆ ಡಾ. ಎಚ್.ಎಸ್. ಸತ್ಯನಾರಾಯಣ, `ನಡುಗನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯ’ಗಳ ಬಗ್ಗೆ ಡಾ. ಶುಭ ಮರವಂತೆ, `ಬಂಡಾಯ ಮತ್ತು ದಲಿತ ಕಾವ್ಯದ ವಿಭಿನ್ನ ನೆಲೆಗಳು’ ಕುರಿತು ಡಾ. ಟಿ. ಯಲ್ಲಪ್ಪ ಹಾಗೂ `ಕನ್ನಡ ಮಹಿಳಾ ಸಾಹಿತ್ಯ ನಡೆದು ಬಂದ ದಾರಿ’ ಕುರಿತು ಸಿ.ಬಿ. ಶೈಲ ಜಯಕುಮಾರ್ ಮಾತನಾಡಲಿದ್ದಾರೆ.
ಅಧ್ಯಾಪಕರಿಗೆ ವಿಶೇಷ ಕಾರ್ಯಕ್ರಮಗಳು
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕನ್ನಡ ಅಧ್ಯಾಪಕರಿಗಾಗಿ 2 ವಿಶೇಷ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ದಿನಾಂಕ 3ರ ಮಧ್ಯಾಹ್ನ 2.30ಕ್ಕೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಯುತ್ತದೆ. ದಿನಾಂಕ 5ರ ಮಧ್ಯಾಹ್ನ 2.30ಕ್ಕೆ `ತಂತ್ರಜ್ಞಾನದೊಂದಿಗೆ ಭಾಷಾ ಬೋಧನೆ’ ಎಂಬ ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಇದರಲ್ಲಿ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ನಿರ್ದೇಶಕ ಬಿ.ಜಿ. ವಿನಯಕುಮಾರ್ ಅಧ್ಯಕ್ಷತೆಯಲ್ಲಿ ಪ್ರದೀಪ್ ಮತ್ತು ಟಿ.ಎಂ. ಬಸವರಾಜ್ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಡುವರು.
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
- ದಿನಾಂಕ 3ರ ಶುಕ್ರವಾರ ಸಂಜೆ 6.30ಕ್ಕೆ ಮೈಸೂರಿನ ಡಾ. ಶ್ವೇತ ಮಡಪ್ಪಾಡಿ ತಂಡ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿಯವರಿಂದ ಸುಮಧುರ ಸಂಗೀತ ಗಾಯನವಿರುತ್ತದೆ.
- ದಿನಾಂಕ 4ರ ಶನಿವಾರ ಸಂಜೆ 6.30ಕ್ಕೆ ಬೆಂಗಳೂರು ಅದಮ್ಯ ಸಾಂಸ್ಕೃತಿಕ ಟ್ರಸ್ಟ್ ಕಲಾವಿದರಿಂದ ಮಹಾಂತೇಶ ನವಲಕಲಮಠ ರಚನೆಯ, ಮಾಲತೇಶ ಬಡಿಗೇರ ನಿರ್ದೇಶನದ
`ನಾನು ಚಂದ್ರಗುಪ್ತನೆಂಬ ಮೌರ್ಯ’ ನಾಟಕ ಪ್ರದರ್ಶನವಿದೆ. - ದಿನಾಂಕ 5ರ ಭಾನುವಾರ ಸಂಜೆ 6.30ಕ್ಕೆ ತುಮಕೂರಿನ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಡಾ. ಸಾಗರ್ ಮತ್ತು ತಂಡದವರಿಂದ ಕನ್ನಡವೇ ಸತ್ಯ ಗೀತ ನೃತ್ಯ ಕಾರ್ಯಕ್ರಮವಿರುತ್ತದೆ.
ದಿನಾಂಕ 4ರ ಶನಿವಾರ ಬೆಳಗ್ಗೆ 10.30ಕ್ಕೆ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು.
ಗೋಷ್ಠಿಯ ಆಶಯ ಭಾಷಣವನ್ನು ಡಾ. ವಿಜಯಶ್ರೀ ಸಬರದ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯ ಡಾ. ಚಿದಾನಂದ ಸಾಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಗೋಷ್ಠಿಯಲ್ಲಿ 30 ಕವಿಗಳು ಕವನ ವಾಚನ ಮಾಡಲಿದ್ದಾರೆ.
ಮಧ್ಯಾಹ್ನ 2.30 ಕ್ಕೆ `ಮರೆಯಲಾಗದ ಮಹನೀಯರು’ ಗೋಷ್ಠಿಯಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ ಮತ್ತು ಸಾಧನೆ ಕುರಿತು ಮೈಸೂರು ಶ್ರೀ ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮೀಜಿಯವರು ವಿಷಯ ಮಂಡನೆ ಮಾಡುವರು. ಸಮಾಜದ ಶಕ ಪುರುಷ ಡಾ. ಹಿರೇಮಲ್ಲೂರು ಈಶ್ವರನ್ ಕುರಿತು ಶಶಿಧರ್ ತೋಡಕರ್, ಕನ್ನಡ ಪ್ರಪಂಚದ ಪಾಟೀಲ ಪುಟ್ಟಪ್ಪನವರ ಬಗ್ಗೆ ಸಂಕಮ್ಮ ಜಿ. ಸಂಕಣ್ಣನವರ, ಚಿಂತನಾಶೀಲ ಗುರು ಡಾ. ಜಿ.ಎಸ್. ಶಿವರುದ್ರಪ್ಪನವರನ್ನು ಕುರಿತು ಪ್ರೊ. ಬಿ.ಪಿ. ವೀರೇಂದ್ರ ಕುಮಾರ್, ಕನ್ನಡದ ಅನನ್ಯ ಪ್ರತಿಭೆ ಡಾ. ಮಹದೇವ ಬಣಕಾರರನ್ನು ಕುರಿತು ಡಾ. ರಾಜಶೇಖರ ಜಮದಂಡಿ ಮಾತನಾಡಲಿದ್ದಾರೆ.
ದಿನಾಂಕ 5ರ ಭಾನುವಾರ 10.30ಕ್ಕೆ `ಬೆಳಗಾವಿ ನಾಗನೂರು ಶ್ರೀ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಗಳವರ ಸಮ್ಮುಖದಲ್ಲಿ ವಚನ ಸಾಹಿತ್ಯದ ಪ್ರಸ್ತುತೆ’ ಎಂಬ ಗೋಷ್ಠಿ ನಡೆಯಲಿದೆ.
ಡಾ. ವೀರಣ್ಣ ರಾಜೂರರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಕುರಿತು ಡಾ. ಬಿ. ನಂಜುಂಡಸ್ವಾಮಿಯವರು, `ಶರಣರ ಸಂಗ ಕರ್ಪೂರ ಗಿರಿಯ ಉರಿಯ ಕೊಂಬಂತೆ’ ಎಂಬ ವಿಷಯ ಕುರಿತು ಡಾ. ಶ್ರೀಧರ್ ಹೆಗಡೆಯವರು ಉಪನ್ಯಾಸ ನೀಡುವರು.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು :
ಸಿರಿಗೆರೆಯ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ಮತ್ತು ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳಿರುತ್ತವೆ. ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಫಲಕ ನೀಡಿ ಗೌರವಿಸಲಾಗುವುದು.