ದಾವಣಗೆರೆ, ಅ.16- ವಿಜಯದಶಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 4.30ರಿಂದ ರಾಷ್ಟ್ರ ಸೇವಿಕಾ ಸಮಿತಿಯಿಂದ ಲಲಿತಾ ಸಹಸ್ರನಾಮ ಹಾಗೂ ದೇವಿ ಭಜನೆ ಪಠಣ ಹಾಗೂ ಸಂಜೆ 6 ಗಂಟೆಯಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಸತೀಶ್ ಪೂಜಾರಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆ ದಿನಾಂಕ 17ರಂದು ಗ್ರೇಸ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ಸಾಂಸ್ಕೃತಿಕ ನೃತ್ಯ ರೂಪಕ, 18ರಂದು ದೈವಜ್ಞ ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ದಾಂಡಿಯಾ ನೃತ್ಯ, 19ರಂದು ಗಾನಸೌರಭ ಸಂಗೀತ ವಿದ್ಯಾಲಯದ ವಿದೂಷಿ ಶುಭದಾ ಅವರ ಶಿಷ್ಯರಿಂದ ವೀಣಾ ವಾದನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, 20ರಂದು ದೃತಿ ಮಹಿಳಾ ಬಳಗದಿಂದ ವಿಭಿನ್ನತೆಯಲ್ಲಿ ಏಕತೆ ಇದೇ ಭಾರತೀಯತೆ, ಭಾರತೀಯ ಸಂಸ್ಕೃತಿಯ ಪರಂಪರೆಯ ಮೆರಗು, 21ರಂದು ಶ್ರೀ ಲಲಿತಾ ಭಜನಾ ಮಂಡಳಿಯಿಂದ ಕೊರವಜ್ಜಿ ನೃತ್ಯ ರೂಪಕ ಹಾಗೂ ದಾಂಡಿಯಾ ನೃತ್ಯ, 22ರಂದು ಶ್ರೀ ಸಿದ್ದಿ ವಿನಾಯಕ ಯೋಗ ಕೇಂದ್ರದ ವತಿಯಿಂದ ಹಳ್ಳಿಯ ಸೊಬಗಿನಲ್ಲಿ ಜನಪದ ನೃತ್ಯ ಹಾಗೂ ದಾಂಡಿಯಾ ನೃತ್ಯ ಹಾಗೂ 23ರಂದು ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರಿಂದ ದಂಡ ಪ್ರದರ್ಶನ ಹಾಗೂ ದಾಂಡಿಯಾ ನೃತ್ಯ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.
24ರಂದು ಶೋಭಾಯಾತ್ರೆ
ದಿನಾಂಕ 24ರಂದು ನಡೆಯುವ ವಿಜಯದಶಮಿಯಂದು ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ಹೊರಡುವ ಶೋಭಾಯಾತ್ರೆ, ಬಂಬೂ ಬಜಾರ್ ರಸ್ತೆ, ಗಣೇಶಗುಡಿ ಬಸ್ ನಿಲ್ದಾಣ, ಚೌಕಿ ಪೇಟೆ, ವಿಜಯಲಕ್ಷ್ಮಿ ರಸ್ತೆ, ದುರ್ಗಾಂಬಿಕಾ ದೇವಸ್ಥಾನ, ವೀರ ಮದಕರಿ ನಾಯಕ ವೃತ್ತ, ರಾಣಿ ಚನ್ನಮ್ಮ ವೃತ್ತದ ಮೂಲಕ ಬೀರಲಿಂಗೇಶ್ವರ ದೇವಸ್ಥಾನ ತಲುಪಿ ಮುಕ್ತಾಯವಾಗ ಲಿದೆ. ಬಳಿಕ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅಂಬುಛೇದನ ಮಾಡಲಿದ್ದಾರೆ ಎಂದು ಸಮಿತಿಯ ಸಂಚಾ ಲಕ ಕೆ.ಆರ್. ಮಲ್ಲಿಕಾರ್ಜುನ್ ತಿಳಿಸಿದರು.
ವಿಜಯದಶಮಿ ಹಿನ್ನೆಲೆಯಲ್ಲಿ ಈಗಾಗಲೇ ಬೀರಲಿಂಗೇಶ್ವರ ಆವರಣದಲ್ಲಿ ದುರ್ಗಾ ಮಾತೆಯ ಘಟ ಪ್ರತಿಷ್ಟಾಪಿಸಲಾಗಿದೆ. ಸನಾತನ ಧರ್ಮದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಹಸ್ತಾಂತರ ಮಾಡುವ ಉದ್ದೇಶದಿಂದ ನಾಳೆ ದಿನಾಂಕ 17ರಂದು ಬೆಳಗ್ಗೆ 10.30ರಿಂದ ವಿನೋಬನಗರದ ಶ್ರೀ ರಾಮಕೃಷ್ಣ ಆಶ್ರಮದ ಬಳಿಯ ಶ್ರೀ ಮಹಾಕಾಳಿಕಾದೇವಿ ದೇವಸ್ಥಾನದ ನವ ವೃಕ್ಷಧಾಮದಿಂದ ಪೂರ್ಣಕುಂಭ ಮೆರವಣಿಗೆ, 19ರಂದು ಬೆಳಗ್ಗೆ 10.30ರಿಂದ ರಾಮ್ ಅಂಡ್ ಕೋ ವೃತ್ತದಿಂದ ಯುವಕರ ಬೈಕ್ ಜಾಥಾ, 20ರಂದು ಬೆಳಗ್ಗೆ 10.30ರಿಂದ ಮಹಿಳಾ ಬೈಕ್ ಜಾಥಾ, 21ರಂದು ಬೆಳಗ್ಗೆ 10.30ರಿಂದ ಹೈಸ್ಕೂಲ್ ಮೈದಾನದಿಂದ ಆಟೋ ರಾಲಿ ಹಾಗೂ 23ರಂದು ಬೆಳಗ್ಗೆ 10 ಗಂಟೆಗೆ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಿಂದ ದುರ್ಗಾದೌಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾ ಲಕ ಕೆ.ಆರ್. ಮಲ್ಲಿಕಾರ್ಜುನ್, ರಾಜನಹಳ್ಳಿ ಶಿವಕುಮಾರ್, ಬಿ.ಜಿ. ಅಜಯಕುಮಾರ್, ಎನ್.ರಾಜಶೇಖರ್, ಪಿ.ಸಿ. ಶ್ರೀನಿವಾಸ್, ರಾಕೇಶ್, ಎಚ್.ಪಿ. ವಿಶ್ವಾಸ್ ಇತರರಿದ್ದರು.