ಯುದ್ಧಗಳು, ಪಟಾಕಿ, ಮದ್ಯ, ತಂಬಾಕಿನಿಂದ ಸಾವುಗಳು ಸ್ವಯಂ ಸೃಷ್ಟಿತ ಮಹಾಪರಾಧ

ಮಾನ್ಯರೇ,

ಪ್ರತಿನಿತ್ಯ ಟಿ.ವಿ. ಪತ್ರಿಕೆಗಳಲ್ಲಿ ನೋಡುತ್ತಲೇ ಬರುತ್ತಿದ್ದೇವೆ. ಮಾನವ ನಿರ್ಮಿತ ಮಹಾಪರಾಧಗಳು ಒಂದೇ, ಎರಡೇ. ಗಾಯಗಳ ಮೇಲೆ ಬರೆ ಎಳೆದಂತೆ ಪ್ರತಿನಿತ್ಯ ಹೆಚ್ಚಾಗುತ್ತಲೇ ಇವೆ. 

ಉದಾಹರಣೆಗೆ ಪ್ರಸ್ತುತ ಇಸ್ರೇಲ್-ಉಕ್ರೇನ್ ಯುದ್ಧಗಳಿಂದ ಸಾವಿರಾರು ಸಾವು-ನೋವುಗಳು, ಪಟಾಕಿ ತಯಾರಿಕೆಗಾಗಿ ನೂರಾರು ಜನ ಸತ್ತಿರುವುದು ದುರಂತ. ದೀಪಾವಳಿ ಬಂದರೆ ಜೀವವನ್ನು ಕೈಯಲ್ಲಿ ಹಿಡಿದು ರಸ್ತೆಗಳಲ್ಲಿ ಓಡಾಡಬೇಕು. ಅದಕ್ಕಾಗಿ ಸಿ.ಎಂ. ಸಿದ್ದರಾಮಯ್ಯನವರು ಇನ್ನು ಮುಂದೆ ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲಿ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಿರುವುದು ಸ್ವಾಗತಾರ್ಹ.

ಇತ್ತೀಚಿನ ಇಪ್ಪತ್ತು-ಮೂವತ್ತು ವರ್ಷಗಳಲ್ಲಿ ಮೊದಲು ಮನೆಗಳಲ್ಲಿ ಅಷ್ಟೇ ಆಚರಿಸುತ್ತಿದ್ದ  ಗಣಪತಿ ಹಬ್ಬ ಇಂದು ಬೀದಿಗಳಲ್ಲಿ ಆರ್ಭಟ, ಶಬ್ಧಮಾಲಿನ್ಯ ಸೃಷ್ಟಿಸಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡುತ್ತಿದೆ. ಡಿ.ಜೆ.ಸೌಂಡ್‍ಗೆ ಹಸುಗೂಸು ಮರಣಿಸಿದ್ದನ್ನು ಕಂಡಿದ್ದೇವೆ.

ಡಿ.ಜೆ. ಸೌಂಡ್‍ನಿಂದ ಬಹಳಷ್ಟು ಜನ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಚಿಕ್ಕಮಕ್ಕಳು ಗನ್ನುಗಳನ್ನು ಆಟಿಕೆಯ ಸಾಮಾನಿನಂತೆ ಬಳಸುತ್ತಿರುವುದು, ಮೂಕ ಪ್ರಾಣಿ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವ ದೃಶ್ಯ ಮನಕಲಕುವಂತಿವೆ. ಇನ್ನು ಡಿಡಿಟಿ (ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ) ದುಶ್ಚಟಗಳಿಂದ ಪ್ರಾಣಹಾನಿ ಮಾಡಿಕೊಳ್ಳುತ್ತಿರುವುದು. ಇವೆಲ್ಲ ಮಾನವ ನಿರ್ಮಿತ ದುಷ್ಕೃತ್ಯಗಳು. ಹಾಗೆ ನೋಡಿದರೆ ಪ್ರಕೃತಿ ವಿಕೋಪಗಳು ಮನಷ್ಯರ ಕೈಯ್ಯಲ್ಲಿಲ್ಲ. 

ಆದರೆ, ಮಾನವ ನಿರ್ಮಿತ ಈ ಮಹಾಪರಾಧಗಳು ನಮ್ಮ ಕೈಯ್ಯಲ್ಲಿವೆ. ದಯವಿಟ್ಟು ಇವುಗಳನ್ನು ಬಿಟ್ಟು ಬಿಡೋಣ. ಸೃಷ್ಟಿಯ ಕಿರೀಟ ಪ್ರಾಯನಾದ ಮನುಷ್ಯ ಇಂತಹ ದುಷ್ಕೃತ್ಯವನ್ನು ಮಾಡುವುದು ಸರಿಯಲ್ಲ. ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞಾನಿಯಾದ ದೇವರು ನಿಜವಾಗಿ ಇರುವುದೇ ಆದರೆ ಇಂತಹ ದುರಂತಗಳನ್ನು ಮಾಡದಿರಲು ಮನುಷ್ಯರಿಗೆಲ್ಲ ಒಳ್ಳೆಯ ಬುದ್ಧಿಯನ್ನು ಕೊಡಲಿ.  


– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.

error: Content is protected !!