ವಿದ್ಯುತ್ ಪೂರೈಸಲು ಸರ್ಕಾರ ವಿಫಲ 16ಕ್ಕೆ ಬೆಸ್ಕಾಂ ಕಚೇರಿಗೆ ಬಿಜೆಪಿ ಮುತ್ತಿಗೆ

ಗ್ಯಾರಂಟಿಗಳ ಭರಾಟೆಯಲ್ಲಿ ವಿದ್ಯುತ್ ಉತ್ಪಾದನೆ, ಬೇಡಿಕೆಯ ಬಗ್ಗೆ ಅರಿಯದೇ ಇಂದು ರೈತ ಕಣ್ಣೀರಿಡುವ ದುಃಸ್ಥಿತಿ

– ಹನಗವಾಡಿ ವೀರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರು

ದಾವಣಗೆರೆ, ಅ.11- ಸಮರ್ಪಕವಾಗಿ ವಿದ್ಯುತ್ ಪೂರೈಕೆಯಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಇದೇ ದಿನಾಂಕ 16ರ ಸೋಮವಾರ ಕೆಇಬಿ ವೃತ್ತದ ಬಳಿಯ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಗಳ ಭರಾಟೆಯಲ್ಲಿ ವಿದ್ಯುತ್ ಉತ್ಪಾದನೆ, ಬೇಡಿಕೆಯ ಬಗ್ಗೆ ಅರಿಯದೇ, ಇಂದು ರೈತ ಕಣ್ಣೀರಿಡುವ ದುಃಸ್ಥಿತಿಯನ್ನು ಸರ್ಕಾರ ಅಕ್ಟೋಬರ್ ತಿಂಗಳಲ್ಲಿಯೇ ತಂದಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಆತಂಕದ ದಿನಗಳು ಎದುರಾಗಲಿವೆ ಎಂದರು.

ಅಮಾಯಕ ಮತದಾರರನ್ನು ವಂಚಿಸಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಾಗಿ  ಹಲವಾರು ಮಾರ್ಗದಲ್ಲಿ ಹಣ ದೋಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಇದೇ 15ಕ್ಕೆ ಭದ್ರಾ ನಾಲೆ ನೀರು ಬಂದ್ ಮಾಡುವುದಾಗಿ ಕಾಡಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಮಾತಿನಂತೆ ನೀರು ಹರಿಸಬೇಕು. ನೀರು ಸ್ಥಗಿತಗೊಳಿಸಿದ್ದೇ ಆದರೆ  ಉಗ್ರ ಹೋರಾಟ ನಡೆಸಲಾಗುವುದು ಎಂದರು.

ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಮಾತನಾಡಿ, ನಿನ್ನೆ ರೈತರು ಸಚಿವರನ್ನು  ಭೇಟಿ ಮಾಡಿದಾಗ, ಮುಖ್ಯಮಂತ್ರಿ ಬಳಿ ನಿಯೋಗ ಹೋಗೋಣ ಎಂದು ಸಚಿವರು ಹೇಳಿದ್ದಾರೆ. ಐಸಿಸಿ ಸದಸ್ಯರೂ ಆಗಿರುವ ಸಚಿವರು ಮುಖ್ಯಮಂತ್ರಿ ಬಳಿ ಹೋಗೋಣ ಎಂದಿರುವುದು ರೈತರನ್ನು ಮೂರ್ಖರನ್ನಾಗಿಸುವ ತಂತ್ರ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಡಿ.ಎಸ್. ಶಿವಶಂಕರ್, ಮುಖಂಡರುಗಳಾದ ಕಡ್ಲೇಬಾಳು ಧನಂಜಯ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್. ಜಗದೀಶ್, ಹೆಚ್.ಎನ್. ಶಿವಕುಮಾರ್, ಕೊಟ್ರೇಶ್ ಗೌಡ್ರು, ಕಡ್ಲೇಬಾಳು ಬಸಣ್ಣ, ಅತಿಥ್ ಅಂಬರ್‌ಕರ್ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!