ನ್ಯಾಮತಿ, ಅ. 8- ಕೃಷಿ ಪಂಪ್ಸೆಟ್ಗಳಿಗೆ ಮೊದಲಿನಂತೆ ಏಳು ಗಂಟೆ ಯಾವುದೇ ಅಡಚಣೆ ಇಲ್ಲದೆ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗುತ್ತಿ ಬಿ.ಎಚ್.ಉಮೇಶ್ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆ ಕೃಷಿ ಪಂಪ್ಸೆಟ್ಗಳಿಗೆ ಬೆಳಗ್ಗೆ 2 ಗಂಟೆ ಮತ್ತು ರಾತ್ರಿ 2ಗಂಟೆ ವಿದ್ಯುತ್ ನೀಡಿದರೆ, ಇರುವ ಅಲ್ಪಸ್ವಲ್ಪ ಬೆಳೆ ಮತ್ತು ತೆಂಗು, ಅಡುಕೆ, ಬಾಳೆ ತೋಟಗಳನ್ನು ಉಳಿಸುಕೊಳ್ಳುವುದಾದರೂ ಹೇಗೆ…? ಎಂದು ಪ್ರಶ್ನಿಸಿದರು.
ರೈತ ಬೆಳೆ ಬೆಳದರಷ್ಟೆ ಎಲ್ಲರೂ ಆಹಾರ ದೊರೆಯುತ್ತದೆ. ಮೊದಲೇ ಮಳೆ ಇಲ್ಲದೆ ಬೆಳೆಗಳು ಕೈಕೊಟ್ಟಿದ್ದು, ಒಮ್ಮೆ ಅತಿವೃಷ್ಟಿ, ಮತ್ತೊಮ್ಮೆ ಅನಾವೃಷ್ಟಿ. ಇದರ ನಡುವೆ ವಿದ್ಯುತ್ ವ್ಯತ್ಯಯ ಮಾಡಿದರೆ ರೈತ ಬದುಕುವುದಾದರೂ ಹೇಗೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಹಾರ ಅಭದ್ರತೆ ಉಂಟಾದರೂ ಆಗಬಹುದು. ಪ್ರಸ್ತುತ ನಿಗಧಿ ಮಾಡಿರುವ ಸಮಯವನ್ನು ಮತ್ತೊಮ್ಮೆ ಪರಿಶೀಲಿಸಿ ವಾರದೊಳಗೆ ಸರಿಪಡಿಸಿಕೊಂಡು ಮೊದಲಿನಂತೆ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರದ ಕೃಷಿಕರಿಗೆ ನೀಡುತ್ತಿದ್ದ ಸಹಾಯಧನ ಹಾಗೂ ಮಕ್ಕಳಿಗೆ ನೀಡುವ ವಿದ್ಯಾನಿಧಿ ಸ್ಕಾಲರ್ಶಿಪ್ ಕೈಬಿಟ್ಟಿದ್ದು, ಸರ್ಕಾರ ಈ ಬಗ್ಗೆ ಮರು ಪರಿಶೀಲಿಸಿ ಜಾರಿ ಮಾಡುವಂತೆ ಮನವಿ ಮಾಡಿದರು.