ದಾವಣಗೆರೆ, ಅ. 6- ಜಿಲ್ಲಾ ಯೋಗ ಒಕ್ಕೂಟ, ಹಿಂದೂ ಮಹಾಗಣಪತಿ ಟ್ರಸ್ಟ್ ಹಾಗೂ ನೂಪುರ ಕಲಾ ಸಂಸ್ಥೆ ಆಶ್ರಯದಲ್ಲಿ ನಾಳೆ ದಿನಾಂಕ 7ರ ಶನಿವಾರ ಸಂಜೆ 5 ಗಂಟೆಗೆ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿರುವ ಮಹಾಗಣಪತಿ ವೇದಿಕೆಯಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ 6.30 ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಒಕ್ಕೂಟದ ಗೌರವಾಧ್ಯಕ್ಷ ಬಿ.ಸಿ. ಉಮಾಪತಿ, ನೂಪುರ ಕಲಾ ಸಂಸ್ಥೆಯ ಅಧ್ಯಕ್ಷೆ ಬೃಂದಾ ಶ್ರೀನಿವಾಸ್, ಆಯುಷ್ ನಿವೃತ್ತ ಅಧಿಕಾರಿ ಡಾ. ಸಿದ್ದೇಶ್ ಮತ್ತಿತರರು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ರಾಣೇಬೆನ್ನೂರಿನ ಆಯೋಧ್ಯಾ ಗಣಪತಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಬುರುಡಿಕಟ್ಟೆ ಅವರನ್ನು ಸನ್ಮಾನಿಸಲಾಗುವುದು. ಇದೇ ವೇಳೆ ಅಂತರರಾಷ್ಟ್ರೀಯ ಯೋಗಪಟುಗಳಿಂದ ಯೋಗ ನೃತ್ಯ, ಗಣಪತಿ ವಂದನೆ, ಭರತನಾಟ್ಯ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ.
ನಂತರ ಭದ್ರಾವತಿ ಬ್ರದರ್ಸ್ ಬಿ. ಲೋಕನಾಥ್ ತಂಡದವರಿಂದ ವಿಶೇಷ ಸಂಗೀತ ರಸದೌತಣ ನಡೆಯಲಿದೆ. ರಾಂ ಅಂಡ್ ಕೋ ವೃತ್ತದಿಂದ ಹೈಸ್ಕೂಲ್ ಮೈದಾನದವರೆಗೆ ಟ್ರ್ಯಾಕ್ಟರ್‌ನಲ್ಲಿ ಸುಮಾರು 12 ಅಡಿಯ ಹೂವಿನ ಹಾರದ ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸಿದ್ದೇಶ್, ಪ್ರಕಾಶ್ ಬುರಡಿಕಟ್ಟಿ, ಜೊಳ್ಳಿ ಗುರು, ಕುಮಾರ್, ಜಯಣ್ಣ ಬಾದಾಮಿ ಮತ್ತಿತರರು ಉಪಸ್ಥಿತರಿದ್ದರು.