ದಾವಣಗೆರೆ, ಅ. 6- ಬಿಸಿಯೂಟ ತಯಾರಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 10 ರಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಈ ಧರಣಿ ನಡೆಯಲಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಮಾಸಿಕ 6,000 ರೂ. ವೇತನ ನೀಡುವುದಾಗಿ 6ನೇ ಗ್ಯಾರಂಟಿಯಾಗಿ ಭರವಸೆ ನೀಡಿತ್ತು. ಕಳೆದ ಸಾಲಿನ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಸಾವಿರ ರೂ. ಹೆಚ್ಚಳ ಮಾಡಿ ಘೋಷಣೆ ಮಾಡಿತ್ತು. ಆ ವೇತನವನ್ನು ಕೂಡಲೇ ಜಾರಿಗೊಳಿಸಬೇಕು. ಎಸ್ಡಿಎಂಸಿ ಅಧ್ಯಕ್ಷರ ಮತ್ತು ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆ ಮಾಡಿಸುವ ಆದೇಶವನ್ನು ಕೂಡಲೇ ರದ್ದುಗೊಳಿಸಿ, ಮೊದಲಿದ್ದ ಹಾಗೆ ಮುಖ್ಯೋಪಾಧ್ಯಾಯರ ಮತ್ತು ಅಡುಗೆಯವರ ಜಂಟಿ ಬ್ಯಾಂಕ್ ಖಾತೆಯನ್ನು ಮುಂದುವರೆಸಬೇಕು. ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ ಎರಡು ಲಕ್ಷ ರೂ. ಇಡಿಗಂಟು ಕೊಡಬೇಕು ಮತ್ತು ಅಡುಗೆ ಮಾಡುವ ಸಮಯದಲ್ಲಿ ಅನಾಹುತಗಳಾಗಿ ಮೃತಪಟ್ಟ ಅಡುಗೆಯ ವರಿಗೆ 25 ಲಕ್ಷ ಪರಿಹಾರ ಕೊಡಬೇಕು ಎನ್ನುವುದು ಸೇರಿದಂತೆ, ಇತರೆ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ಮಾಡುವ ಮೂಲಕ ಸರ್ಕಾರಕ್ಕೆ ಒತ್ತಾಯಿ ಸಲಾಗುವುದು ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ರಾಜ್ಯ ಖಜಾಂಚಿ ರುದ್ರಮ್ಮ ಬೆಳಗೆರೆ ಮತ್ತಿತರೆ ಪದಾಧಿಕಾರಿಗಳು ತಿಳಿಸಿದ್ದಾರೆ.