ದಾವಣಗೆರೆ, ಸೆ. 30- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತ ದಾವಣಗೆರೆ ಎಂಬ ಫೇಸ್ಬುಕ್ ಅಕೌಂಟ್‌ನಲ್ಲಿ ಸೆ. 28 ರಂದು `ಮಸೀದಿ ಕಡೆ ಸಿದ್ಧು ನಡೆ’ ಎಂಬ ಶೀರ್ಷಿಕೆ ಅಡಿಯಲ್ಲಿ ರಾಜಕೀಯ ದುರುದ್ಧೇಶದಿಂದ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕಾಯ್ದೆ ಅಡಿ ದೂರು ನೀಡುವುದಾಗಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೋಸ್ಟ್ ಹಾಕಿದವರು ಹಾಗೂ ಇದನ್ನು ಬೆಂಬಲಿಸಿ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದವರ ವಿರುದ್ಧ ಸೈಬರ್ ಕ್ರೈಮ್ ಅಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಠಿಸಿ ಇದರಿಂದ ರಾಜಕೀಯ ಲಾಭ ಪಡೆಯಲು ಸಂಚು ರೂಪಿಸಿದ್ದಾರೆ. ಈ ಪ್ರಕರಣದಿಂದ ಓರ್ವ ನಾಯಕನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.
ಸೂಕ್ತ ಕ್ರಮ ಜರುಗಿಸುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಬೆಂಗಳೂರಿನ ಡಿಜಿಪಿ, ಐಜಿಪಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ದೂರು ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಮಹಮದ್ ಜಿಕ್ರಿಯಾ, ಕೆ.ಎಂ. ಮಂಜುನಾಥ, ನಂಜಾನಾಯ್ಕ, ಎಂ.ಕೆ. ಲಿಯಾಖತ್ ಅಲಿ, ಡಿ. ಶಿವಕುಮಾರ್ ಉಪಸ್ಥಿತರಿದ್ದರು.