ವಿದ್ಯಾನಗರದ ಮಟ್ಟಿ ಆಂಜನೇಯ ಸ್ವಾಮಿ ಎಡೆ ಪರವು

ವಿದ್ಯಾನಗರದ ಮಟ್ಟಿ ಆಂಜನೇಯ ಸ್ವಾಮಿ ಎಡೆ ಪರವು

ದಾವಣಗೆರೆ, ಸೆ.30- ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿದ್ಯಾನಗರದ ಮಟ್ಟಿ ಆಂಜನೇಯ ಸ್ವಾಮಿಯ ಎಡೆ ಪರವು ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ನಡೆಯುವ ಈ ಪರವು ಕಾರ್ಯಕ್ರಮದ ಭಾಗವಾಗಿ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ಮೊನ್ನೆ ಶುಕ್ರವಾರ ರಾತ್ರಿ ಶಾಮನೂರಿನ ಶ್ರೀ ಆಂಜನೇಯ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ಆಗಮನವಾಯಿತು. ಇಡೀ ರಾತ್ರಿ ಶಾಮನೂರು ಭಜನಾ ತಂಡದಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮಗಳು ಜರುಗಿದವು. 

ಇಂದು ಬೆಳಿಗ್ಗೆ ಮೂರು ದೇವರುಗಳಿಗೆ ವಿವಿಧ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಗಳಿಂದ ನೆರವೇರಿದವು. 

ದೇವಸ್ಥಾನದ ಭಕ್ತರಾದ ಕೆ.ಬಿ.ಕೊಟ್ರೇಶ್ ಮತ್ತು ಶಾಮನೂರಿನ ಚನ್ನಪ್ಪ ಗೌಡರು ಮತ್ತು ಮಂಜಣ್ಣ ಮಾತನಾಡಿ, ಶಾಮನೂರು, ನಿಟುವಳ್ಳಿ, ಶಿರಮಗೊಂಡನಹಳ್ಳಿಗಳು ಗಡಿ ಪ್ರದೇಶಗಳಾಗಿದ್ದು, ಇದರ ರಕ್ಷಣೆಗಾಗಿ ಶತಮಾನಗಳ ಹಿಂದೆ ಮಟ್ಟಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪರವು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಶತಮಾನಗಳು ಉರುಳಿದರೂ ಕೂಡ ಎಡೆ ಪರವು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಹಿಂದೆಲ್ಲ ಭಕ್ತರು ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಇಲ್ಲಿಯೇ ತಂಗಿ ರಾತ್ರಿಇಡೀ ಸ್ವಾಮಿಯ ಸೇವೆ ಮಾಡಿ, ಬೆಳಿಗ್ಗೆ ಪ್ರಸಾದ ವಿನಿಯೋಗ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಪರವು ಮಾಡಿದ ದಿನ ಈ ಭಾಗದಲ್ಲಿ ಮಳೆ ಬರುವುದು ವಿಶೇಷ. ಇದೀಗ ಇದಕ್ಕಾಗಿ ಸಮಿತಿ ರಚಿಸಿಕೊಂಡು ಕಳೆದ 25 ವರ್ಷಗಳಿಂದ ಪರವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಮಂಜಣ್ಣ, ಕೊರಟಿಕೆರೆ ಶಿವಕುಮಾರ್, ಪ್ರಭು, ಮಾರುತಿ, ಆನಂದ್, ಲಿಂಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಪ್ರಸಾದ ವಿನಿಯೋಗ ನಡೆಯಿತು.

error: Content is protected !!