ರಾಣೇಬೆನ್ನೂರು, ಸೆ.19- ಕಳೆದ ಆರು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ವಾಣಿಜ್ಯ ನಗರಿ ರಾಣೇಬೆನ್ನೂರಿನ ಕಾಕಿ ಜನಸೇವಾ ಸಂಸ್ಥೆ ಈ ಬಾರಿ ಬೃಹತ್ ಅರಮನೆ ನಿರ್ಮಿಸುತ್ತಿದ್ದು, 21ಅಡಿ ಎತ್ತರದ ವಿಘ್ನನಿವಾರಕ ವಿಘ್ನರಾಜನ ಪ್ರತಿಷ್ಟಾಪನೆ ಮಾಡಿರುವುದಾಗಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದರು.
ಆಸಕ್ತರಿಗೆ ಆರು ಅಡಿ ಉದ್ದ, ಅರವತ್ತೈದು ಕೆಜಿ ತೂಕದ ಧನಸ್ಸು ಎತ್ತಿ ಕೆಳಗಿರುವ ಕನ್ನಡಿಯಲ್ಲಿ ನೋಡುತ್ತಾ ಮೇಲಿರುವ ಪಕ್ಷಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜಯಶಾಲಿಗಳಿಗೆ ಬಹುಮಾನದ ಜೊತೆ ಗೌರವ ಸಲ್ಲಿಸಲಾಗುತ್ತದೆ.
50 ರೂ. ಗಳ ಕೂಪನ್ ಕೊಡಲಾಗುತ್ತಿದ್ದು, ಕೊನೆಯ ದಿನ ಲಾಟರಿ ಮೂಲಕ ವಿಜೇತರಾದವರಿಗೆ ಒಂದು ಲಕ್ಷ ಕಿಮ್ಮತ್ತಿನ ಮನೆ ಬಳಕೆ ವಸ್ತುಗಳನ್ನು ಕೊಡಲಾಗುವುದು. ಹನ್ನೊಂದು ದಿನ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಗಮಿಸುವ ಎಲ್ಲ ಭಕ್ತರಿಗೆ ಪ್ರತಿದಿನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀನಿವಾಸ ವಿವರಿಸಿದರು.
ಸ್ಥಳೀಯ ಅಂದರೆ ತಾಲ್ಲೂಕಿನ ಕುಪ್ಪೇಲೂರು ಗ್ರಾಮದ ಕಲಾವಿದ ರಾಜು ಸುಂಕಾಪೂರ ಅತ್ಯಂತ ಆಕರ್ಷಕವಾಗಿ ಗಣೇಶ ಮೂರ್ತಿ ನಿರ್ಮಿಸಿದ್ದಾರೆ. ಉತ್ತರ ಭಾರತ ಶೈಲಿಯ ಅರಮನೆ ಇದಾಗಿದೆ ಎಂದು ವಿವರಿಸಿದ ಶ್ರೀನಿವಾಸ ಕಾಕಿ ಜೊತೆ ಶಿವಾನಂದ ಸಾಲಗೇರಿ, ಮಂಜುನಾಥ ಹೊಸಪೇಟೆ, ಹನುಮಂತಪ್ಪ ಕಾಕಿ, ಶಿವಶಂಕರ, ಎಸ್.ಎಂ.ಬಗಾದಿ ಮತ್ತಿತರರಿದ್ದರು.