ದಾವಣಗೆರೆ, ಸೆ. 14- ತಾಲ್ಲೂಕಿನ ಉಳುಪಿನಕಟ್ಟೆ ಬಳಿ ನಿರ್ಮಿಸಿರುವ ರೈತ ಹುತಾತ್ಮರ ಸ್ಮಾರಕ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮನಸ್ಸು ಮಾಡಿದರೆ ಪ್ರವಾಸಿ ತಾಣವನ್ನಾಗಿ ಮಾಡಲು ಸಾಧ್ಯವಿದೆ ಎಂದು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷರೂ, ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ಎನ್.ಜಿ. ಪುಟ್ಟಸ್ವಾಮಿ ಹೇಳಿದರು.
ಉಳುಪಿನಕಟ್ಟೆ ಕ್ರಾಸ್ ಬಳಿ ನಿನ್ನೆ ನಡೆದ ರೈತ ಹುತಾತ್ಮರ ಸ್ಮಾರಕ ಭವನದ ಉದ್ಘಾಟನೆ ಹಾಗೂ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತ ಹುತಾತ್ಮರ ಸ್ಮಾರಕ ಭವನದ ಪ್ರದೇಶದಲ್ಲಿ ರೈತ ಸಮುದಾಯ ಭವನ, ವಸತಿ ಗೃಹಗಳ ನಿರ್ಮಾಣ, ಕೃಷಿ ಪರಿಕರಗಳ ವಸ್ತು ಪ್ರದರ್ಶನ ಆಯೋಜನೆ ಸೇರಿದಂತೆ, ಇತರೆ ಸವಲತ್ತುಗಳನ್ನು ಕಲ್ಪಿಸುವ ಕಡೆ ಸಚಿವ ಮಲ್ಲಿಕಾರ್ಜುನ್ ಅವರು ಗಮನಹರಿಸಬೇಕೆಂದು ಮನವಿ ಮಾಡಿದರು.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಮಲ್ಲಿಕಾರ್ಜುನ್ ಅವರ ಕೊಡುಗೆ ಅಪಾರವಾದುದು. ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಗರವನ್ನು ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ. ಸಿಮೆಂಟ್, ಡಾಂಬರ್ ರಸ್ತೆಗಳನ್ನು ಮಾಡಿದ್ದು, ಜಿಲ್ಲೆಗೆ ಮಲ್ಲಣ್ಣನಂತಹ ಜನಪ್ರತಿನಿಧಿ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಬಣ್ಣಿಸಿದರು.
ರೈತ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಯಾದಿಯಾಗಿ ಮುಖ್ಯಮಂತ್ರಿಯಾಗಿದ್ದವರು, ಶಾಸಕರು, ಸಚಿವರು ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆಂದರು.
ಹಳೆಯ ಸ್ಮಾರಕಕ್ಕೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದರು. ಇದೀಗ ಸ್ಥಳಾಂತರಗೊಂಡ ನೂತನ ಸ್ಮಾರಕ ಭವನವನ್ನು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿರುವುದು ಸರಿಯಷ್ಟೆ, ಇಲ್ಲಿ ಒಂದು ರೈತ ಸಮುದಾಯ ಭವನ ನಿರ್ಮಾಣ ಸಾಧ್ಯವಾಗುತ್ತಿಲ್ಲ. ರೈತರಾದ ನಾವೇನು ಲೋಪ ಎಸಗಿದ್ದೇವೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು, ಜಿಲ್ಲಾ ಮಂತ್ರಿಗಳು ಮನಸ್ಸು ಮಾಡಿದರೆ ರೈತ ಸಮುದಾಯ ಭವನ ನಿರ್ಮಾಣ ಅಸಾಧ್ಯವೇನಲ್ಲ. ದಾವಣಗೆರೆ ನಗರದಲ್ಲಿ ಒಂದು ಕಿಮೀ ಸಿಮೆಂಟ್ ರಸ್ತೆ ನಿರ್ಮಿಸಲು ನಾಲ್ಕು ಕೋಟಿ ರೂ. ವೆಚ್ಚ ಮಾಡುತ್ತಾರೆ. ಆದರೆ ಒಂದು ರೈತ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಶ್ರೀಗಳು ಜಿಲ್ಲಾ ಮಂತ್ರಿಗಳು ಮತ್ತು ಮುಖ್ಯ ಮಂತ್ರಿಗಳಿಗೆ ಶಕ್ತಿ ತುಂಬಬೇಕು ಎಂದರು.
ಕಳೆದ 31 ವರ್ಷಗಳಿಂದ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದರೂ ಸಮಿತಿ ವತಿಯಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿಲ್ಲ. ಅಭಿವೃದ್ಧಿಪಡಿ ಸಲು ಮುಖ್ಯಮಂತ್ರಿಗಳು, ರಾಜಕೀಯ ನಾಯಕರಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಶಾಸಕ ಕೆ.ಎಸ್. ಬಸವಂತಪ್ಪ ಅವರ ಮೂಲಕ ಜಿಲ್ಲಾ ಮಂತ್ರಿಗಳಿಗೂ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ನನ್ನ ರಾಜಕೀಯ ಪ್ರವೇಶ ಕೂಡ ಆನಗೋಡಿನ ಈ ಪಣ್ಯಭೂಮಿಯಿಂದಲೇ ಎಂದ ಅವರು, ಜೆಡಿಎಸ್ನಿಂದ ಬಿಜೆಪಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನನ್ನ ಅಳಿಲು ಸೇವೆ ಸಲ್ಲಿಸುತ್ತೇನೆ. ನಾನು ಮೂರು ಪಕ್ಷಗಳಲ್ಲಿ ಇದ್ದರೂ ಸಹ ಯಾವುದೇ ಜನಪ್ರತಿನಿಧಿಗಳಿಂದ ಬಿಡಿಗಾಸು ಕೂಡ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.