ಮಲೇಬೆನ್ನೂರು, ಸೆ. 14- ಪಟ್ಟಣದ ಬೀರಲಿಂಗೇಶ್ವರ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಭಾನುವಳ್ಳಿ ಹಣಚಿಕ್ಕಿ ಕರಿಬಸಪ್ಪನವರ ಮೊಮ್ಮಗ ಮನ್ವಿತ್ (6 ವರ್ಷ) ಎಂಬ ಪುಟ್ಟ ಬಾಲಕ ಉಸಿರಾಟದ ತೊಂದರೆಯಿಂದಾಗಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ಸಂಜೆ ಮಲೇಬೆನ್ನೂ ರಿನಲ್ಲಿ ನಡೆದಿದೆ.
ಪ್ರಶಾಂತ್ ಮತ್ತು ದಾಕ್ಷಾಯಿಣಿ ಇವರ ಪುತ್ರನಾದ ಮನ್ವಿತ್ ಜಿಗಳಿ ಗ್ರಾಮದ ಗುರುಧ್ಯಾನ ಶಾಲೆಯಲ್ಲಿ 1 ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.
ಗುರುವಾರ ಸಾಯಂಕಾಲ ಶಾಲೆ ಮುಗಿದ ನಂತರ ಮಲೇಬೆನ್ನೂರಿನಲ್ಲಿರುವ ಮನೆಗೆ ತೆರಳಲು ಸ್ಕೂಲ್ ಬಸ್ ಹತ್ತುವಾಗ ಮೂರ್ಛೆ ಬಂದು ಬಿದ್ದಿದ್ದಾನೆ.
ತಕ್ಷಣ ಶಾಲೆಯವರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ವಾಂತಿಯನ್ನು ಮಾಡಿಕೊಂಡಿದ್ದಾನೆ. ನಂತರ ಮಕ್ಕಳ ಆಸ್ಪತ್ರೆಗೆ ಹೋದಾಗ ಬಾಲಕನಿಗೆ ಉಸಿರಾಟದ ತೊಂದರೆ ಇದೆ. ಆಕ್ಸಿಜನ್ ಹಾಕಬೇಕೆಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರುವಷ್ಟರಲ್ಲಿ ಉಸಿರಾಟ ನಿಂತೇ ಹೋಗಿತ್ತೆಂದು ಹೇಳಲಾಗಿದೆ.
ಮನ್ವಿತ್ ಇನ್ನಿಲ್ಲ ಎಂಬ ವಿಷಯ ತಿಳಿದ ಅಜ್ಜ, ಅಜ್ಜಿ, ತಂದೆ-ತಾಯಿ
ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮನ್ವಿತ್ ಅಂತ್ಯಕ್ರಿಯೆ ನಾಳೆ ದಿನಾಂಕ 15 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮಲೇಬೆನ್ನೂರಿನಲ್ಲಿ ನೆರವೇರಲಿದೆ.