ದಾವಣಗೆರೆ, ಸೆ.13 – 10ನೇ ಮತ್ತು ದ್ವಿತೀಯ ಪಿಯು ತರಗತಿಯ ವಿದ್ಯಾರ್ಥಿಗಳಿಗೆ ನಂ. 1, 2,3 ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸ್ವಾಗತಿಸಿದ್ದಾರೆ. ವಾರ್ಷಿಕ ಪರೀಕ್ಷೆ ಮತ್ತು ಅದರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಎಂಬ ಮಾದರಿಯನ್ನು ಕೈ ಬಿಟ್ಟು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಉಂಟಾಗುವ ಒತ್ತಡವನ್ನು ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಉಂಟಾಗುವ ಮಾನಸಿಕ ತಳಮಳವನ್ನು ನಿವಾರಿಸಲು ಇದು ಸಹಕಾರಿ ಆಗಬಹುದೆಂದು ಭಾವಿಸುತ್ತೇವೆ.
ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರನ್ನು ಒಳಗೊಂಡ ಪ್ರಜಾತಾಂತ್ರಿಕ ಪ್ರಕ್ರಿಯೆ ಮುಖಾಂತರ ಈ ನಿರ್ಧಾರವನ್ನು ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಎಐಡಿಎಸ್ಓ ಒತ್ತಾಯಿಸುತ್ತದೆ ಎಂದು ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ತಿಳಿಸಿದ್ದಾರೆ.