ಓಸಿ, ಇಸ್ಪೀಟ್, ಜೂಜು ರಹಿತ ರಾಣೇಬೆನ್ನೂರು ನನ್ನ ಕನಸು

ಓಸಿ, ಇಸ್ಪೀಟ್, ಜೂಜು ರಹಿತ ರಾಣೇಬೆನ್ನೂರು ನನ್ನ ಕನಸು - Janathavaniರಾಣೇಬೆನ್ನೂರು, ಮೇ 30- ಅನೇಕ ಬಡ ಕುಟುಂಬಗಳು ಓಸಿ, ಇಸ್ಪೀಟ್ ಆಟಗಳಿಂದ ನಲುಗಿಹೋಗಿವೆ. ಮನೆಗಳಲ್ಲಿನ ಪಾತ್ರೆ-ಪಡಗಗಳು, ಹೆಂಡಿರ ಕೊರಳೊಳಗಿನ ತಾಳಿಗಳನ್ನು ವತ್ತೆ ಇಟ್ಟ, ಮಾರಾಟ ಮಾಡಿದ ಸಾವಿರಾರು ಉದಾಹರಣೆಗಳು ಕಂಡುಬರುತ್ತಿವೆ. ಬಡವರ ಬದುಕಿಗೆ ಮಾರಕವಾಗಿರುವ ಈ ಪಿಡುಗನ್ನು ಇಂದಿನಿಂದಲೇ ಬಂದ್ ಮಾಡು ವಂತೆ ಪೊಲೀಸರಿಗೆ ಕಟ್ಟಪ್ಪಣೆ ಮಾಡಿರುವುದಾಗಿ ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಇಲ್ಲಿನ ಖಾಸಗಿ ವಸತಿ ಗೃಹದ ಸಭಾಭವನದಲ್ಲಿ ಇಂದು ಏರ್ಪಾಡಾಗಿದ್ದ ಸಮಾರಂಭದಲ್ಲಿ ಪತ್ರಕರ್ತರ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಪ್ರಕಾಶ ಕೋಳಿವಾಡ ಗೆಲ್ತಾರೆ, ಸೋಲ್ತಾರೆ. ಇಂದು ಮಳೆ ಬರುತ್ತೆ, ಇಲ್ಲಾ ಎನ್ನುವುದರಿಂದ ಹಿಡಿದು ಕ್ರಿಕೆಟ್ ಮುಂತಾದ ಬದುಕಿನಲ್ಲಿ ಬರುವ ಎಲ್ಲ ಚಟುವಟಿಕೆಗಳಿಗೂ ಬೆಟ್ ಕಟ್ಟುವುದು ಸಾಮಾನ್ಯವಾಗಿದೆ. ಇಂತಹ ಜೂಜುಗಳಿಂದ ಯುವಕರ ಬದುಕು ದಾರಿ ತಪ್ಪಿದ ಅನೇಕ ಉದಾಹರಣೆಗಳು ಎಲ್ಲ ಹಂತಗಳಲ್ಲೂ ಕೇಳಿಬರುತ್ತಿದ್ದು. ಜೂಜು ರಹಿತ ರಾಣೇಬೆನ್ನೂರು ಮಾಡುವುದು ನನ್ನ ಕನಸಾಗಿದೆ. ತಾಲ್ಲೂಕಿನಲ್ಲಿ ಎಲ್ಲಿಯೇ ಆಗಲಿ ಇಂತಹ ಜೂಜಾಟ ಕಂಡುಬಂದರೆ ಪೋಲಿಸರ ಮೇಲೆಯೇ ಕಾನೂನು ಕ್ರಮ ಜರುಗಿಸುವುದಾಗಿ ತಮ್ಮ ಬಿಗಿ ನಿಲುವು ಪ್ರಕಟಿಸಿದರು.

ಸಂಚಾರಿ ನಿಯಮ: ನಗರದಲ್ಲಿ ಬಹಳಷ್ಟು ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು  ನನ್ನ ನಿರುದ್ಯೋಗ  ರಹಿತ ಗ್ಯಾರಂಟಿಗೆ ತೊಡಕಾಗಲಿದೆ. ಹೊರ ರಾಜ್ಯ, ಹೊರ ದೇಶಗಳಿಂದ ಬರುವ ಉದ್ಯೋಗಪತಿಗಳು ರಸ್ತೆ, ನೀರು, ಸ್ವಚ್ಛತೆ, ರಸ್ತೆ ನಿಯಮ ಪಾಲನೆ  ಮುಂತಾದ ಮೂಲಭೂತ ಸೌಕರ್ಯಗಳನ್ನು ಅಪೇಕ್ಷಿಸುತ್ತಾರೆ. ಆ ದಿಶೆಯಲ್ಲಿ ನಾಗರಿಕರು ಸಹಕಾರ ನೀಡಬೇಕು ಎಂದು  ಮನವಿ ಮಾಡಿದ ಶಾಸಕರು ಇಲ್ಲೂ ಕಾನೂನಿನ ಪ್ರಯೋಗ ಬಿಗಿಗೊಳಿಸಲಾಗುವುದು ಎಂದರು.

ಪ್ರವಾಸಿ ತಾಣ: ಜಗತ್ತಿನಲ್ಲಿ ರಾಜಸ್ಥಾನ ಮತ್ತು ರಾಣೇಬೆನ್ನೂರು ಸೇರಿದಂತೆ ಎರಡು ಕಡೆ ಮಾತ್ರ  ಕೃಷ್ಣಮೃಗ ಅಭಯಾರಣ್ಯಗಳಿದ್ದು, ಇಲ್ಲಿಯದನ್ನು  ಅಭಿವೃದ್ಧಿಪಡಿಸುವುದು, ನಗರ ಛಾಯೆಗಳಿರದೆ ಹಳ್ಳಿಯ ಸೊಗಡು  ಪ್ರತಿಬಿಂಬಿಸುವ ಮನೆಗಳು,  ನಗರದ ದೊಡ್ಡಕೆರೆಯ ನೀಲನಕ್ಷೆಯನ್ನು ಪೂರ್ಣಗೊಳಿಸುವುದು, ಪ್ರವಾಸೋದ್ಯಮ ಬೆಳೆಸಿ  ವಿದೇಶಿಯರನ್ನು ಆಕರ್ಷಿಸುವ ಪ್ರವಾಸಿ ತಾಣ ನಿರ್ಮಾಣ ಮಾಡುವ ಬಯಕೆ ನನ್ನದಾಗಿದೆ ಎಂದು ಶಾಸಕ ಪ್ರಕಾಶ ಹೇಳಿದರು.

50 ವರ್ಷಗಳಿಂದ ತಾಲ್ಲೂಕಿನ ಜನರ ಪ್ರೀತಿ ಪಡೆದುಕೊಂಡಿದ್ದ ನನ್ನ ತಂದೆ ಕೆ.ಬಿ.ಕೋಳಿವಾಡ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಉಳಿದಿರುವ  ರಿಂಗ್ ರಸ್ತೆ, ಉಪವಿಭಾಗಾಧಿಕಾರಿ ಕಛೇರಿ ಸೇರಿದಂತೆ ಅವರ ಯೋಚನೆಯ ಕಾರ್ಯಗಳನ್ನು ಪೂರ್ಣಗೊಳಿಸುತ್ತೇನೆ. ನಗರದಲ್ಲಿ ಅಳವಡಿಸಿರುವ  ಸಿಸಿ ಕ್ಯಾಮರಾಗಳು ಹಾಳಾಗಿವೆ. ಅವು ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ ಅಪರಾಧಗಳ ತಡೆ ಹಾಗೂ ಅಪರಾಧಿಗಳ ಪತ್ತೆಗೆ ತೊಂದರೆಯಾಗಿದ್ದು, ನಗರದಾದ್ಯಂತ ಶೀಘ್ರವಾಗಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಸ್ಥಳೀಯನಾದ ನಾನು, ನನ್ನ ತಾಲ್ಲೂಕಿನ ಜನರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವ ಹಂಬಲ ನನ್ನದಾಗಿದೆ. ಆಕಸ್ಮಿಕವಾಗಿ ತಪ್ಪು ನಡೆದರೆ ಅದನ್ನ ವೈಭವೀಕರಿಸದೆ, ನಾನು ಮಾಡುವ ಜನಪರ ಕಾರ್ಯಗಳಿಗೆ ಪ್ರೋತ್ಸಾಹಿಸಿರಿ. ಜನರ ಪ್ರೀತಿಯನ್ನು ನಿರಂತರವಾಗಿರಿಸಿಕೊಳ್ಳುವ ಪ್ರಯತ್ನ ನನ್ನದಾಗಿದೆ ಎಂದು    ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

error: Content is protected !!