ಸುಸ್ಥಿರ ಆಹಾರ – ಕೃಷಿ ಪದ್ಧತಿಯಿಂದ ಬಡತನ, ಹಸಿವು, ರೋಗ ಮುಕ್ತ ಜೀವನ ಸಾಧ್ಯ

ಸುಸ್ಥಿರ ಆಹಾರ – ಕೃಷಿ ಪದ್ಧತಿಯಿಂದ ಬಡತನ, ಹಸಿವು, ರೋಗ ಮುಕ್ತ ಜೀವನ ಸಾಧ್ಯ

ಸೃಷ್ಟಿಯ ವಿಕಸನ ಶ್ರೇಣಿಯ ಮುಂಚೂಣಿಯಲ್ಲಿರುವ ನಾವು ಇನ್ನಾದರೂ ವೈವಿಧ್ಯತೆಯಿಂದ ಕೂಡಿದ
ಆರೋಗ್ಯಕರ ಹಾಗು ಸುಸ್ಥಿರವಾದ ಆಹಾರ ಮತ್ತು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು
ಬಡತನ, ಹಸಿವು, ರೋಗ ಮುಕ್ತವಾದ ಉನ್ನತ ಗುಣ ಮಟ್ಟದ ಜೀವನ ನಡೆಸಿ ಮುಂದಿನ ಪೀಳಿಗೆಗೆ ಮಾದರಿಯಾಗೋಣ…

ಪ್ರತಿ ವರ್ಷ ಆಚರಿಸುವ ವಿಶ್ವ ತಂಬಾಕು ರಹಿತ ದಿನದ ಉದ್ದೇಶವು ತಂಬಾಕಿನಿಂದ ಉಂಟಾಗುವ ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು, ತಂಬಾಕು ರಹಿತ ಆರೋಗ್ಯಕರ ಜೀವನ ನಡೆಸುವುದು ಮತ್ತು ಮುಂದಿನ ಪೀಳಿಗೆಯನ್ನು ತಂಬಾಕು ಮುಕ್ತರನ್ನಾಗಿಸುವುದು. ವಿಶ್ವ ಸಂಸ್ಥೆಯು ಇತರೆ ಸದಸ್ಯ ದೇಶಗಳ ಜೊತೆಗೂಡಿ ಏಪ್ರಿಲ್ 7, 1987 ರಲ್ಲಿ ಮೊದಲ ಬಾರಿಗೆ ವಿಶ್ವ ಧೂಮಪಾನ ರಹಿತ ದಿನ ಎಂದು ನಿರ್ಣಯಿಸಿತಾದರೂ 1988 ರಲ್ಲಿ `ಮೇ 31 ವಿಶ್ವ ತಂಬಾಕು ರಹಿತ ದಿನ’ವೆಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಮೇ 31 ರಂದು ತಂಬಾಕಿನ ವಿವಿಧ ವಿಷಯಗಳ ಕುರಿತಾದ ಚರ್ಚೆ, ಆಂದೋಲನ, ಜನ ಜಾಗೃತಿ ಕಾರ್ಯಕ್ರಮ ಗಳು ವಿಶ್ವದಾದ್ಯಂತ ನಡೆಯುತ್ತಿವೆ.

ಹದಿನೇಳನೇ ಶತಮಾನದಲ್ಲಿ ಪೋರ್ಚುಗೀಸರಿಂದ ಭಾರತಕ್ಕೆ ಪರಿಚಯಿಸಲ್ಪಟ್ಟ ತಂಬಾಕು ಪ್ರಸ್ತುತ ದಿನಗಳಲ್ಲಿ ಅಗೆಯುವ ಮತ್ತು ಸೇದುವ ರೂಪದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಸಿಗರೇಟ್ ಬಳಕೆ ನಗರ ಪ್ರದೇಶಗಳಲ್ಲಿ, ಮೇಲ್ವರ್ಗದವರಲ್ಲಿ, ವಿದ್ಯಾವಂತರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದರೆ ಗುಟ್ಕಾ, ಪಾನ್ ಮಸಾಲಾ ಪದಾರ್ಥಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಯುವಕರ, ಕೂಲಿ ಕಾರ್ಮಿಕರ, ರಿಕ್ಷಾ ಚಾಲಕರ, ಕ್ಯಾಬ್‌ ಡ್ರೈವರ್‌ಗಳ ದಣಿವು ಮತ್ತು ಹಸಿವು ನೀಗಿಸುವ ಸಾಧನಗಳಾಗಿ ಕಾಣಸಿಗುತ್ತಿವೆ. ಇತ್ತೀಚಿನ ‘ಗ್ಯಾಟ್’ ಸಮೀಕ್ಷೆಯ ವರದಿ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 265 ಮಿಲಿಯನ್ ವಯಸ್ಕರು ಸೇದುವ ಮತ್ತು ಆಗೆಯುವ ತಂಬಾಕಿಗೆ ವ್ಯಸನಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಅದರಲ್ಲಿ ಶೇ. 42 ಪುರುಷರು ಹಾಗು ಶೇ. 14 ಮಹಿಳೆಯರು ಎನ್ನಲಾಗಿದೆ. ಮಿತಿ ಮೀರಿ ಬೆಳೆಯುತ್ತಿರುವ ಈ ದುಶ್ಚಟವು ಪ್ರತಿ ವರ್ಷ 8 ಮಿಲಿಯನ್ ಜನರನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದು ಅತ್ಯಂತ ಶೋಚನೀಯ ವಿಷಯ.ವ್ಯಸನಿಗಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ರೋಗಗಳು, ಉಸಿರಾಟದ ತೊಂದರೆಗಳು ಪಾರ್ಶ್ವವಾಯು, ಬಾಯಿಯ ಕ್ಯಾನ್ಸರ್‌ ನಂತಹ ಮಾರಣಾಂತಿಕ ಕಾಯಿಲೆಗಳು ಕುಟುಂಬವನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುತ್ತಿದ್ದರೆ, ಪರೋಕ್ಷ ಧೂಮಪಾನಿಗಳಲ್ಲಿ (ಸೆಕೆಂಡ್ ಹ್ಯಾಂಡ್ ಸ್ಟೋಕರ್) ಕಡಿಮೆ ತೂಕದ ಶಿಶುವಿನ ಜನನ, ಸಂತಾನೋತ್ಪತ್ತಿ ಸಮಸ್ಯೆಗಳು ಕಾಡುತ್ತಿವೆ.

ಈ ದುಶ್ಚಟವು ಶಾರೀರಿಕ ಸಮಸ್ಯೆಯಾಗದೇ ಉಳಿಯದ ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗು ನೈಸರ್ಗಿಕ ಆಯಾಮಗಳಿಗೂ ಪಸರಿಸಿ ಬಿಡಿಸಲಾಗದ ಕಗ್ಗಂಟಾಗಿ ಹೋಗಿದೆ. ತಂಬಾಕು ಉದ್ದಿಮೆದಾರರು ಹಣ ಗಳಿಸುವ ಭರದಲ್ಲಿ ಸಿಗರೇಟ್, ಗುಟ್ಕಾ, ಪಾನ್‌ ಮಸಾಲಾ ತಯಾರಿಕೆಗೆ ಅಪಾಯಕಾರಿ ರಾಸಾಯನಿಕಗಳು, ಅತಿ ಸೂಕ್ತ ಪ್ಲಾಸ್ಟಿಕ್ ಬಳಸಿ ನಮ್ಮ ಭೂಮಂಡಲವನ್ನು ‘ವಿಷಕಾರಿ’ಯಾಗಿ ಪರಿವರ್ತಿಸುತ್ತಿದ್ದರೆ, ತಂಬಾಕು ವ್ಯಸನಿಗಳು ಎಲ್ಲೆಂದರಲ್ಲಿ ಸೇದಿ ಬಿಸಾಡುವ ಸಿಗರೇಟ್ ತುಂಡುಗಳು ಹಾಗು ಗುಟ್ಕಾ ಪ್ಯಾಕೆಟ್‌ಗಳು, ಸಿಗರೇಟ್ ಹೊಗೆಯಲ್ಲಿರುವ ವಿಷಕಾರಿ ಕಾರ್ಬನ್ ಡೈಆಕ್ಷ ಹಾಗು ಸಿಗರೇಟ್ ತುಂಡಿನಲ್ಲಿರುವ ಸೀಸ, ವಾ, ನೀರು ಮತ್ತು ಮಣ್ಣನ್ನು ಸೇರಿ ಅನೇಕ ಜೀವರಾಶಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಇನ್ನು ಅಂತರರಾಷ್ಟ್ರೀಯ ತಂಬಾಕು ಕಂಪನಿಗಳು ಆರ್ಥಿಕವಾಗಿ ಹಿಂದಿಳಿದ ದೇಶಗಳಿಗೆ ಹಣದ ಆಸೆಯನ್ನು ತೋರಿಸಿ ರೈತರಿಗೆ ಪ್ರೋತ್ಸಾಹ ನೀಡುತ್ತಿರುವ ಕಾರಣಕ್ಕಾಗಿ ಸುಮಾರು 125 ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಬರಸಹಿಷ್ಣು ಮತ್ತು ಅಲ್ಪಾವಧಿ ಬೆಳೆಯೆಂದು ತಂಬಾಕನ್ನು 1 ಮಿಲಿಯನ್ ಹೆಕ್ಟೇರು ಪ್ರದೇಶದಲ್ಲಿ ಬೆಳೆಯತೊಡಗಿವೆ. ನಮ್ಮ ದೇಶವು ತಂಬಾಕು, ರಫ್ತು ಮಾಡುವ ದೇಶಗಳಲ್ಲಿ 2 ನೇ ಸ್ಥಾನ ಪಡೆದಿದ್ದು, ಪ್ರತಿ ವರ್ಷ 1,400 ಕೋಟಿ ವಿದೇಶಿ ವಿನಿಮಯಗಳಿಗೆ ತಂಬಾಕು ಒಂದರಿಂದಲೇ ಉತ್ಪತ್ತಿ ಮಾಡುತ್ತಿದೆ.

ಅತ್ಯಂತ ಲಾಭದಾಯಕ ಉದ್ದಿಮೆಯಾಗಿ ಬೆಳೆದಿರುವ ತಂಬಾಕು ಅನೇಕ ಕೃಷಿಕರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಭಾರತ ಹಾಗು ವಿಶ್ವದ ಅನೇಕ ದೇಶಗಳು ಪ್ರತಿ ವರ್ಷ 3.5 ಮಿಲಿಯನ್ ಹೆಕ್ಟೇರು ಭೂಪ್ರದೇಶವನ್ನು ತಂಬಾಕು ಕೃಷಿಗಾಗಿ ಬಳಸತೊಡಗಿವೆ. ಇದರಿಂದಾಗಿ ಆರೋಗ್ಯಕರ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಕೊರತೆಯುಂಟಾಗುತ್ತಿದೆ ಹಾಗು ತಂಬಾಕು ಬೆಳೆಯಲಾದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡು ಮರುಭೂಮಿಯಾಗಿ ಪರಿವರ್ತಿತವಾಗುತ್ತಿದೆ. ಆಫ್ರಿಕಾ ಖಂಡದ ಅನೇಕ ಕಡಿಮೆ ಆದಾಯದ ದೇಶಗಳು ತಂಬಾಕಿನಿಂದ ಬರುವ ಲಾಭವನ್ನು ಆಹಾರ ಆಮದು ಮಾಡಿಕೊಳ್ಳುವಲ್ಲಿ ಉಪಯೋಗಿಸುತ್ತಿದ್ದು ಬಡತನದ ಸುಳಿಯಿಂದ ಹೊರಬರಲಾರದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಿವೆ. ಇನ್ನು ಮಧ್ಯಮ ಆದಾಯದ ದೇಶಗಳು ಅತಿ ಹೆಚ್ಚು ಲಾಭಗಳಿಸುವ ದುರಾಸೆಯಲ್ಲಿ ಫಲವತ್ತಾದ ಭೂಮಿ, ಹಸಿರಾದ ಕಾಡನ್ನು ನಾಶ ಪಡಿಸಿ ಪರಿಸರ ವ್ಯವಸ್ಥೆಯನ್ನು ಹಾಳುಮಾಡತೊಡಗಿವೆ. ಈ ಆಘಾತಕಾರಿ ಕಾರಣಗಳಿಂದಾಗಿ ವಿಶ್ವ ಸಂಸ್ಥೆಯು ಪ್ರಸ್ತುತ ವರ್ಷವನ್ನು `ನಮಗೆ ಆಹಾರ ಬೇಕು ತಂಬಾಕಲ್ಲ’ ಎಂಬ ಘೋಷ ವಾಕ್ಯದಿಂದ ಜನರಲ್ಲಿ ಅರಿವು ಮೂಡಿಸಲು ಎಲ್ಲಾ ಸದಸ್ಯ ದೇಶಗಳಿಗೆ ಕರೆಕೊಟ್ಟಿದೆ, ನಾವೇ ಸೃಷ್ಟಿಸಿಕೊಂಡಿರುವ ಈ ಗಂಭೀರ ಸಮಸ್ಯೆಯ ಬಗ್ಗೆ ಈಗಲೂ ನಾವು ಎಚ್ಚರ ವಹಿಸದಿದ್ದರೆ ಮುಂಬರುವ ಪೀಳಿಗೆಗೆ ಹಸಿವು, ದಾಹದಿಂದ ಬಳಲುತ್ತಿರುವ ಪ್ರಪಂಚವನ್ನು ಕೊಡುಗೆಯಾಗಿ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು. ಸೃಷ್ಟಿಯ ವಿಕಸನ ಶ್ರೇಣಿಯ ಮುಂಚೂಣಿಯಲ್ಲಿರುವ ನಾವು ಇನ್ನಾದರೂ ವೈವಿಧ್ಯತೆಯಿಂದ ಕೂಡಿದ ಆರೋಗ್ಯಕರ ಹಾಗು ಸುಸ್ಥಿರವಾದ ಆಹಾರ ಮತ್ತು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬಡತನ, ಹಸಿವು, ರೋಗ ಮುಕ್ತವಾದ ಉನ್ನತ ಗುಣ ಮಟ್ಟದ ಜೀವನ ನಡೆಸಿ ಮುಂದಿನ ಪೀಳಿಗೆಗೆ ಮಾದರಿಯಾಗುತ್ತಾ ಸಾಗೋಣವಲ್ಲವೇ ?


ಡಾ. ಉಷಾ ಜಿ.ವಿ., ಪ್ರಾಧ್ಯಾಪಕರು
ಸಮುದಾಯ ದಂತ ಶಾಸ್ತ್ರ ವಿಭಾಗ
ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆ.

 

error: Content is protected !!