ಮಾದಾರ ಚನ್ನಯ್ಯ ಜಯಂತಿ ಸಮಾರಂಭದಲ್ಲಿ ಶ್ರೀ ಷಡಾಕ್ಷರಮುನಿ ಸ್ವಾಮೀಜಿ ಕರೆ
ಹರಿಹರ, ಫೆ. 16 – ಮಾದಿಗ ಸಮುದಾಯದವರು ಧಾರ್ಮಿಕ ಆಚರಣೆಗಳಿಗೆ ಮಾಡುತ್ತಿರುವ ಖರ್ಚು – ವೆಚ್ಚಗಳನ್ನು ಕಡಿತಗೊಳಿಸಬೇಕೆಂದು ಹಿರಿಯೂರು ತಾಲ್ಲೂಕು ಕೋಡಿಹಳ್ಳಿ ಮಠದ ಶ್ರೀ ಷಡಾಕ್ಷರ ಮುನಿ ದೇಶೀಕೇಂದ್ರ ಸ್ವಾಮೀಜಿ ಕಿವಿ ಮಾತು ಹೇಳಿದರು.
ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ಗುರುವಾರ ಮಾದಾರ ಚನ್ನಯ್ಯ ಜಯಂತಿ ನಿಮಿತ್ತ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶ ಹಾಗೂ ಸರಳ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ವಿಧಿ – ವಿಧಾನಗಳಿಗೆ ದುಡಿಮೆಯ ಬಹುಭಾಗ ಕಳೆಯುತ್ತೀರಿ. ಇದರ ಬದಲು ಉತ್ತಮ ಬಟ್ಟೆ ಧರಿಸಿರಿ, ಪೌಷ್ಟಿಕ ಆಹಾರ ಸೇವಿಸಿ, ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ, ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿರಿ ಎಂದು ಸಲಹೆ ನೀಡಿದರು.
ತಾ.ಪಂ., ಜಿ.ಪಂ., ಶಾಸಕ ಸ್ಥಾನದ ಟಿಕೆಟ್ ಕೊಡಿ ಎಂದು ವಿವಿಧ ಪಕ್ಷಗಳವರನ್ನು ಬೇಡುವುದು ಬಿಟ್ಟು ಬಿಡಿ. ಮೊದಲು ಸಮಾಜವನ್ನು ಸಂಘಟಿಸಿರಿ. ಸಂಘಟನೆ ಗಟ್ಟಿಯಾಗಿದ್ದರೆ, ಸಮಾಜದ ಜನ ಶಿಕ್ಷಣವಂತರಾಗಿದ್ದರೆ ಪಕ್ಷಗಳ ನಾಯಕರೇ ನಿಮ್ಮ ಮನೆ ಬಾಗಿಲಿಗೆ ಬಂದು ಟಿಕೆಟ್ ನೀಡುತ್ತಾರೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮೊಳಕಾಲ್ಮೂರು ತಾಲ್ಲೂಕು ಸಿದ್ದಯ್ಯನಕೋಟೆಯ ವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಶ್ರೀ ಮಾತನಾಡಿ, ರಾಜ್ಯದಲ್ಲೆಡೆ ದೊಡ್ಡ ಸಂಖ್ಯೆಯಲ್ಲಿ ಮಾದಿಗ ಸಮಾಜವಿದೆ. ನೀವು ಸಂಘಟಿತರಾದರೆ ಸಮಾಜವು ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.
ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಕಂಡ ಕಲ್ಯಾಣ ರಾಜ್ಯದ ಕಲ್ಪನೆ ಜಾರಿಯಾಗಬೇಕಿದೆ. ಶೋಷಣೆ ಸಮಾಜ ದಲ್ಲಿ ಸಂಪೂರ್ಣ ನಿರ್ಮೂಲನೆಯಾಗಬೇಕಿದೆ ಎಂದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಸಂವಿಧಾನ ಬದಲಿಸುವ ಮಾತುಗಳನ್ನಾಡಲಾಗುತ್ತಿದೆ. ಈಗಿರುವ ಆಡಳಿತಗಾರರು ಸಂವಿಧಾನದ ಸ್ವರೂಪವನ್ನು ಬದಲಿಸಿದರೆ ನಾವೆಲ್ಲಾ ಮತ್ತೆ 75 ವರ್ಷ ಹಿಂದಿನ ದುಸ್ಥಿತಿಗೆ ಮರಳಬೇಕಾಗುತ್ತದೆ ಎಂದರು.
ಸಮಾರಂಭದಲ್ಲಿ 12 ಜೋಡಿ ದಂಪತಿಗಳು ವಿವಾಹ ಬಂಧನಕ್ಕೆ ಒಳಗಾದರು.
ಕಾಂಗ್ರೆಸ್ ಮುಖಂಡರಾದ ಎ.ಗೋವಿಂದ ರೆಡ್ಡಿ, ಡಾ.ಹೆಚ್.ಮಹೇಶ್ವರಪ್ಪ, ಎಂ.ನಾಗೇಂದ್ರಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಹೆಚ್.ಆರ್.ತೇಗನೂರ, ನಿವೃತ್ತ ಇಇ ಬಿ.ಗುರುನಾಥ, ದಲಿತ ಮುಖಂಡರಾದ ಹೆಚ್.ಮಲ್ಲೇಶ್, ಡಿ.ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಬಸವಂತಪ್ಪ, ತಾ.ಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಮಾದಿಗ ಸಮಾಜದ ಪದಾಧಿಕಾರಿಗಳಾದ ಎಂ.ಬಿ.ಅಣ್ಣಪ್ಪ, ಎಂ.ಎಸ್.ಆನಂದ ಕುಮಾರ್, ಎ.ಕೆ. ಶಿವರಾಮ್, ಎಂ.ಎಸ್.ಶ್ರೀನಿವಾಸ್, ಗಂಗಾಧರ ಹೆಚ್.ಕೊಂಡಜ್ಜಿ, ಹೆಚ್. ಶಿವಪ್ಪ, ಜಿ.ಹೆಚ್.ಸಿದ್ದಾರೂಢ, ನಾಗೇಂದ್ರಪ್ಪ, ಕೊಕ್ಕನೂರು ಬಿ.ಡಿ. ಬಸವರಾಜಪ್ಪ, ಆರ್.ಮಂಜುನಾಥ್ ಇತರರಿದ್ದರು.