ಇಮಾಂ ಸಾಹೇಬರಂತಹ ರಾಜಕಾರಣಿಗಳು ಕಣ್ಮರೆ

ಇಮಾಂ ಸಾಹೇಬರಂತಹ ರಾಜಕಾರಣಿಗಳು ಕಣ್ಮರೆ

ಜಗಳೂರು: ಜೆಎಂ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋ.ರು.ಚ ಕಳವಳ

ಧರ್ಮಾತೀತವಾಗಿ ದೇಶದಲ್ಲಿ ಇಮಾಂ ಅವರು ಇಮ್ಮಣ್ಣ ವಾಗಿರುವುದೇ ಭಾರತದ ಬಹುತ್ವ ಸಂಸ್ಕೃತಿ. ದೇಶದಲ್ಲಿನ ಮುಸ್ಲಿಂ ಸಮುದಾಯ ಇಮಾಂ ಸಾಹೇಬರ ಅನುಯಾಯಿಗಳಾಗಬೇಕಿದೆ. ಹಲವು ಧರ್ಮಗಳಿರುವ ಭಾರತದಲ್ಲಿ ಬಹು ಸಂಸ್ಕೃತಿ ಉಳಿದು ಬಹುತ್ವ ರಾಷ್ಟ್ರವಾಗಬೇಕಿದೆ. 

– ರಂಜಾನ್ ದರ್ಗಾ,  ಜೆ.ಎಂ.ಇಮಾಂ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ಲೇಖಕ

ಜಗಳೂರು, ಫೆ. 16- ಸಂವಿಧಾನದ ಪಾವಿತ್ರ್ಯತೆ ಕಾಪಾಡಬೇಕಾದ ರಾಜಕಾರಣಿ ಗಳು ಇಂದು ಚೆಲ್ಲಾಟವಾಡುತ್ತಿದ್ದಾರೆ. ದಿ.ಇಮಾಂ ಸಾಹೇಬರಂತಹ ಮುತ್ಸದ್ದಿ ರಾಜ ಕಾರಣಿಗಳು ಕಣ್ಮರೆಯಾಗಿದ್ದಾರೆ ಎಂದು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಹಾಗೂ ಜಾನಪದ ವಿದ್ವಾಂಸ  ನಾಡೋಜ ಡಾ. ಗೋ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಇಮಾಂ ಶಾಲಾ ಆವರಣದಲ್ಲಿ ಇಮಾಂ ಟ್ರಸ್ಟ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ `ಜೆ.ಎಂ.ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಿ.ಇಮಾಂ ಸಾಹೇಬರ ಮೇಲೆ ನನಗೆ ಅಪಾರ ಅಭಿಮಾನವಿದೆ. ಅವರು ಮೈಮನ ಗಳಲ್ಲಿ ಸದಾ ಜಾಗೃತಿ ಅಂತಃಪ್ರಜ್ಞೆಯಿಂದ ರಾಜಕೀಯ ಪರಿಪಕ್ವತೆ ಹೊಂದಿದ್ದರು. ಇಂದಿಗೂ ಅವರು  ಜನಮಾನಸದ ಹೃದಯ ದಲ್ಲಿ ಉಳಿದಿದ್ದಾರೆ. ಇವರ ರಾಜಕೀಯ ವೃತ್ತಿ ಜೀವನ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದರು.

ವಿಧಾನ ಸಭೆಯಲ್ಲಿನ ಚರ್ಚೆಗಳು ಜನಸಾಮಾನ್ಯರು ತಲೆತಗ್ಗಿಸುವಂತಿವೆ. ಸಂವಿಧಾನದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಇದು ದೇಶದ ಜನರ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಇಮಾಂ ಸಾಹೇಬರ ಸ್ಮರಣೆಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ರಂಜಾನ್ ದರ್ಗಾ ಅವರು ಧರ್ಮಾತೀತವಾಗಿ ಪ್ರಗತಿಪರ, ವೈಚಾರಿಕ ಸಾಹಿತ್ಯದಿಂದ ಮಾಧ್ಯಮ, ಸಾಮಾಜಿಕ ಹೋರಾಟದ ಸೇವೆಗೈದಿದ್ದು, ಅವರ ಸಂಶೋಧನಾ ಸಾಮರ್ಥ್ಯಗಳ ಬಗ್ಗೆ ಅವರು ರಚಿಸಿದ ಕೃತಿಗಳೇ ಸಾರುತ್ತವೆ. ದರ್ಗಾ ಅವರಿಗೆ ಇಮಾಂ ರಾಜ್ಯ ಪ್ರಶಸ್ತಿ ಪ್ರದಾನ ನನಗೆ ಸಂತಸ ತಂದಿದೆ ಎಂದು ಗೋ.ರು.ಚ.  ಹೇಳಿದರು.

ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ರಹಮತ್ ತರೀಕೆರೆ ಮಾತನಾಡಿ, ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದ ರಾಜಕಾರಣಿ ಇಮಾಂ ಸಾಹೇಬರಾಗಿದ್ದರು. ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದ ಮುತ್ಸದ್ಧಿ ರಾಜಕಾರಣಿಗಳಾಗಿ ಸೇವೆಗೈದ ಎಸ್.ನಿಜಲಿಂಗಪ್ಪ, ದೇವರಾಜ ಅರಸು, ಜವಾಹರ್ ಲಾಲ್ ನೆಹರೂ ಅವರ ಸಾಲಿನಲ್ಲಿ ಇಮಾಂ ಸಾಹೇಬರೊಬ್ಬರಾಗಿದ್ದಾರೆ. ಇವರು ಜನರ ನೆಮ್ಮದಿಯ ಬದುಕಿನ‌ ಚಿಂತನೆಯುಳ್ಳವರಾಗಿದ್ದರು. ರಚನಾತ್ಮಕ ವಿರೋಧ ಪಕ್ಷದ ನಾಯಕರಾಗಿದ್ದರು ಎಂದು ಸ್ಮರಿಸಿದರು.

ಪ್ರಗತಿಪರ ಸಾಹಿತಿ ರಂಜಾನ್ ದರ್ಗಾ ಅವರ ಕಾವ್ಯ ಮೀಮಾಂಸೆಯ ಆಶಯದಂತೆ ದೇಶದಲ್ಲಿ ಬಂಡವಾಳಶಾಹಿತ್ವ ಪರ ಆಡಳಿತ ಕೊನೆಗೊಳ್ಳಬೇಕಿದೆ ಎಂದರು.

ಜೆ.ಎಂ.ಇಮಾಂ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ಲೇಖಕ ರಂಜಾನ್ ದರ್ಗಾ ಮಾತನಾಡಿ, ನಾನು ಬಾಲ್ಯದಿಂದಲೇ ಇಮಾಂ ಸಾಹೇಬರ ಪರಿಚಯ ಕಂಡವನು. ಅವರೇ ನನ್ನ ಸಾಮಾಜಿಕ ಸೇವೆ ಸಾಹಿತ್ಯಲೋಕದ ಪಾದಾರ್ಪಣೆಗೆ ಸ್ಪೂರ್ತಿ ಎಂದರು.

ಮಹಾರಾಷ್ಟ್ರದ ಶಾಹು ಮಹಾರಾಜರ ಆಳ್ವಿಕೆ ಮಾದರಿಯಲ್ಲಿ ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಆಡಳಿತವಿತ್ತು. ಈ ವೇಳೆ ಇಮಾಂ ಸಾಹೇಬರು ಸಚಿವರಾಗಿ ನಿಸ್ವಾರ್ಥ ಸೇವೆಯಿಂದ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿದರು. ನೀರಾವರಿ, ಶಿಕ್ಷಣ ಕ್ಷೇತ್ರಗಳಿಗೆ  ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಜಗಳೂರಿನ ನಿವಾಸಕ್ಕೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಆಗಮಿಸಿದ ಇತಿಹಾಸವಿದೆ. ಇದು ಅವರ ಘನತೆ ಎತ್ತಿಹಿಡಿಯುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯ್ಯಾ ಸಾಬ್, ಪಿಂಜಾರ ಸಮಾಜದ ರಾಜ್ಯಾಧ್ಯಕ್ಷ ಜಲೀಲ್ ಸಾಬ್, ಹೆಚ್.ಇಬ್ರಾಹಿಂ ಟ್ರಸ್ಟ್ ಅಧ್ಯಕ್ಷ ದಾದಾಖಲಂದರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ನಿವೃತ್ತ ಪ್ರಾಂಶುಪಾಲ ಯಾದವ ರೆಡ್ಡಿ, ಡಾ.ಬಿ.ಎ. ರಾಜಪ್ಪ, ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್, ಆಡಳಿತ ಅಧಿಕಾರಿ ಜೆ.ಕೆ.ಮುನ್ನ, ನಿವೃತ್ತ ಉಪನ್ಯಾಸಕ ತಿಮ್ಮರಾಜ್, ಡಿ.ಸಿ.ಮಲ್ಲಿಕಾರ್ಜುನ್ ಸೇರಿದಂತೆ ಶಿಕ್ಷಕರು ಹಾಗೂ  ವಿದ್ಯಾರ್ಥಿಗಳು ಇದ್ದರು.

error: Content is protected !!