ದಾವಣಗೆರೆ,ಫೆ.23- ನಗರದ ಪಿ.ಬಿ. ರಸ್ತೆ ಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ ಬಳಿ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಕಚೇರಿಗೆ ಬರುವವರು ನಿತ್ಯವೂ ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಹರಸಾಹಸ ಪಡಬೇಕಾಗಿದೆ.
ನೋಂದಣಿ ಕೆಲಸಗಳಿಗಾಗಿ ಜಿಲ್ಲೆಯ ವಿವಿಧೆಡೆಯಿಂದ ಕಚೇರಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಆದರೆ ಅವರಿಗೆ ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದರಲ್ಲಿ ಪಾರ್ಕ್ ಮಾಡುವ ಅನಿವಾರ್ಯತೆ ಒದಗಿ ಬರುತ್ತದೆ. ನಡೆಯಲಾಗದ ಹಿರಿಯರು
ಬಂದರಂತೂ ಕಚೇರಿ ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ ಎಂದು ನಾಗರಿಕರ ಪರವಾಗಿ ಅಣಬೇರು ಜಗದೀಶ್ ಹೇಳಿದರು.
ಬೇಕಾಬಿಟ್ಟಿ ನಿಲ್ಲಿಸಿದ ವಾಹನಗಳನ್ನು ಅನೇಕ ಬಾರಿ ಟ್ರಾಫಿಕ್ ಪೊಲೀಸರು ಹೊತ್ತೊಯ್ದ ಉದಾಹರಣೆಗಳೂ ಇವೆ. ನೋಂದಣಿಗೆ ಬಂದವರು ವಾಹನ ಹುಡುಕಿಕೊಂಡು ಟ್ರಾಫಿಕ್ ಪೊಲೀಸ್ ಠಾಣೆಯತ್ತ ದೌಡಾಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡುವಂತೆ ಜಗದೀಶ್ ಕೋರಿದ್ದಾರೆ.