ತಮ್ಮ ಇಚ್ಛಾನುಸಾರ ಠರಾವು ಬರೆದ ಅಧ್ಯಕ್ಷರು : ಆರೋಪ

ತಮ್ಮ ಇಚ್ಛಾನುಸಾರ ಠರಾವು ಬರೆದ ಅಧ್ಯಕ್ಷರು : ಆರೋಪ

ರಾಣೇಬೆನ್ನೂರು, ಮಾ.18- ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳ ನಿರ್ಣಯಗಳನ್ನು ತಿರುಚಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಠರಾವುಗಳನ್ನು  ಬರೆಯಿಸಿ  ಪೌರಾಡಳಿತದ ಕಾನೂನುಗಳನ್ನು ಗಾಳಿಗೆ ತೂರಿರುವ ರಾಣೇಬೆನ್ನೂರು ನಗರಾಧ್ಯಕ್ಷರು ನಗರದ ನಾಗರಿಕರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಆರೋಪಿಸಿದ್ದಾರೆ.

ನಾವು ಅಧಿಕೃತ ಬಿಜೆಪಿ ಸದಸ್ಯರು ಎನ್ನುವ ಗುಂಪಿನ 11 ಸದಸ್ಯರ ಜೊತೆಗೂಡಿ ಇಂದು ಬಿಜೆಪಿ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಿನಾಂಕ 20 ರಂದು 100 ವಿಷಯಗಳ ಪಟ್ಟಿಯ ಸ್ಥಾಯಿ ಸಮಿತಿ ರಚಿಸುವ 88 ನೇ ವಿಷಯ ಕುರಿತು ಚರ್ಚಿಸಿ ಸೂಚನೆ, ಉಪ ಸೂಚನೆಗಳಿಗೆ ಅನುಮೋದನೆ ಮುಂತಾಗಿ  ನಡೆದ ನಡಾವಳಿಕೆಗಳನ್ನು  ಮರೆಮಾಚಿ ಯಾವುದೇ ರೀತಿಯ ಚರ್ಚೆ ನಡೆಯದೇ ಮುಂದೂಡಲಾಯಿತು ಎಂದು ಸದಸ್ಯರಿಗೆ ಅಂದಿನ ಸಭೆಯ ನಿರ್ಣಯಗಳ ಪ್ರತಿಗಳನ್ನು ಸರಬರಾಜು ಮಾಡಿದ್ದಾರೆ. ಜೊತೆಗೆ 1 ರಿಂದ 87 ವಿಷಯಗಳ ಕುರಿತು ಚರ್ಚೆ ನಡೆದು ಕೆಲವು ಮುಂದಿನ ಸಭೆಗೆ ಮಂಡಿಸುವ, ಕೆಲವು ಸದಸ್ಯರು ಸೂಚಿಸಿದ ಕಾಮಗಾರಿ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. 

ಸಭೆಯಲ್ಲಿ ಚರ್ಚಿಸಿದ ನಡಾವಳಿಕೆಗಳನ್ನು ಬದಲಾಯಿಸಿ, ತಮಗೆ ಅನುಕೂಲಕರವಾಗಿ ಠರಾವುಗಳನ್ನು ಬರೆದುಕೊಂಡದ್ದನ್ನು ದೃಢೀಕರಿಸಲು ಅವಶ್ಯ ದಾಖಲೆಗಳಾದ ಸಭಾ ನಡಾವಳಿಕೆಗಳ ಸಿ.ಸಿ. ಕ್ಯಾಮೆರಾ ಹಾಗೂ ವಿಡಿಯೋ ಕ್ಲಿಪ್ಪಿಂಗ್‌ಗಳ ಜೊತೆ ತಾವು ಇಲಾಖೆಯ ಅಧಿಕಾರಿಗಳಿಗೆ  ಆಗಿರುವ ಅನ್ಯಾಯ ಸರಿಪಡಿಸಲು ಮನವಿ ಸಲ್ಲಿಸಿದ್ದೇವೆ.ಇಲ್ಲಿ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಪ್ರಕಾಶ ಬುರಡಿಕಟ್ಟಿ ವಿವರಿಸಿದರು.

ಗೋಷ್ಠಿಯಲ್ಲಿ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ಪಾಂಡುರಂಗ ಗಂಗಾವತಿ, ಪ್ರಕಾಶ ಪೂಜಾರ, ರೂಪಾ ಚಿನ್ನಿಕಟ್ಟಿ, ಗಂಗಮ್ಮ ಹಾವನೂರ, ಪ್ರಭಾವತಿ ತಿಳವಳ್ಳಿ, ಕವಿತಾ ಹೆದ್ದೇರಿ,  ಮಂಜುಳಾ ಹತ್ತಿ, ಸಿದ್ದಪ್ಪ ಬಾಗಲರ ಮತ್ತಿತರ ಸದಸ್ಯರಿದ್ದರು.

error: Content is protected !!