ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ ಸಾಕ್ಷರತೆ ಅತ್ಯಗತ್ಯ

ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ ಸಾಕ್ಷರತೆ ಅತ್ಯಗತ್ಯ

ದಾವಣಗೆರೆ, ಮಾ. 18 – `ಮೂರ್ಖರು ನಡೆದ ದಾರಿಯಲ್ಲಿ ವಿದ್ಯಾವಂತರು ಹೆಜ್ಜೆ ಇಡುವಂತಾಗಬಾರದು’. ಜನರಲ್ಲಿ ಮೌಢ್ಯ ಬಿತ್ತದೆ, ಅರಿವನ್ನುಂಟು ಮಾಡಬೇಕು. ಜನರಲ್ಲಿ ವೈಜ್ಞಾನಿಕತೆಯನ್ನು ಬೆಳೆಸಬೇಕೆನ್ನುವುದು ಸಂವಿಧಾನದ ಆಶಯ. ಸಂವಿಧಾನದ ಭಾಗ 4ಎ, ವಿಧಿ 51 ಎ (ಎಚ್) ರಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಪ್ರತಿ ಭಾರತೀಯ ನಾಗರೀಕರ ಕರ್ತವ್ಯ ಎಂಬುದಾಗಿ ಶಿಬಿರದ ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷಾ ತಿಳಿಸಿದರು.

ಸ್ಥಳೀಯ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಛೇರಿಯಲ್ಲಿ ಕಳೆದ ವಾರ ನಡೆದ `ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನ ಸಾಕ್ಷರತೆ’ ಎಂಬ ಒಂದು ದಿನದ ಕಾರ್ಯಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸಂವಿಧಾನದ ರಚನೆ, ಕಾರ್ಯಗಳು ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದರು.

ಭಾರತ ಸಂವಿಧಾನ ಎಂದರೆ, ಧರ್ಮ, ಜಾತಿ, ಲಿಂಗ, ವರ್ಗ, ಪ್ರದೇಶ, ಭಾಷೆ ಎಲ್ಲವನ್ನೂ ಮೀರಿ ಭಾರತದ ನಾಗರಿಕರಾದ ನಮಗೆಲ್ಲರಿಗೂ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ದಾರಿದೀಪ. ಅದರ ಮೂಲಭೂತ ಆಶಯವನ್ನಾದರೂ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರು ಅರಿತುಕೊಳ್ಳುವುದು ಅತ್ಯಗತ್ಯ ಎಂದು ಸುದೀರ್ಘ ಒಂದು ದಿನದ ಕಾರ್ಯ ಶಿಬಿರದಲ್ಲಿ ನಂಬಿಕೆ, ಮೂಢ ನಂಬಿಕೆ, ವೈಜ್ಞಾನಿಕ ಮನೋವೃತ್ತಿ ಮತ್ತು ಸಂವಿಧಾನದ ರಚನೆ, ಇತಿಹಾಸ ಮತ್ತು ಪ್ರಾಮುಖ್ಯತೆ ಬಗ್ಗೆ ಸವಿವರವಾಗಿ ಸಂವಾದ ಮಾಡಿದರು.

ಸಂವಿಧಾನದ ಪ್ರಸ್ತಾವನೆಯನ್ನು ಅನಾವರಣ ಮಾಡುವುದರ ಮೂಲಕ  ಚಿಂತಕ ಪ್ರೊ. ಎಂ. ಬಸವರಾಜ್ ಅವರು ಉದ್ಘಾಟನೆ ಮಾಡಿದರು. ಮೌಢ್ಯ ಮತ್ತು ಸಂವಿಧಾನದ ರಚನೆಯ ಬಗ್ಗೆ ತಮಗಿದ್ದ ಕೆಲವೊಂದು ಪ್ರಶ್ನೆಗಳಿಗೆ ಶಿಬಿರಾರ್ಥಿಗಳು ಪ್ರಶ್ನಿಸುವುದರ ಮೂಲಕ ಉತ್ತರ ಪಡೆದರು.

ವಕೀಲ ಅನಿಷ್ ಪಾಷ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕರುಣಾ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ರೈತ ನಾಯಕ ತೇಜಸ್ವಿ ಪಟೇಲ್ ಸ್ವಾಗತಿಸಿದರು. 

ಜಾಗತಿಕ ಲಿಂಗಾಯತ ಅಧ್ಯಕ್ಷರಾದ ರುದ್ರಮುನಿ, ಕುಸುಮಾ ಲೋಕೇಶ್, ಗುರುಮೂರ್ತಿ, ಕೆ.ಎಸ್. ಈಶ್ವರಪ್ಪ ಮುಂತಾದವರು ಭಾಗವಹಿಸಿದ್ದರು.

error: Content is protected !!