ಹರಿಹರ, ಮಾ. 9- ಅಂಗನವಾಡಿ ಕಾರ್ಯ ಕರ್ತರಿಗೆ ಮತ್ತು ಸಹಾಯಕಿ ಯರಿಗೆ ವೇತನ ನಿಗದಿ ಮಾಡುವಲ್ಲಿ, ನಮ್ಮ ನಂಬಿಕೆ ಹುಸಿಗೊಳಿಸಿ ಕಾರ್ಯ ಕರ್ತರಿಗೆ ನೋವು ತರಿಸು ವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು
ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘದ ರಾಜ್ಯ ಉಪಾಧ್ಯಕ್ಷೆ ಬಿ.ಎಸ್. ನಿರ್ಮಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ, ನಿಮ್ಮ ನಿರೀಕ್ಷೆಗೆ ತಕ್ಕಂತೆ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು.
ಆದರೆ ಈ ಬಜೆಟ್‌ನಲ್ಲಿ ಅಂಗನವಾಡಿ ಶಿಕ್ಷಕರಿಗೆ 1 ಸಾವಿರ ಮತ್ತು ಸಹಾಯಕಿಯರಿಗೆ 750 ರೂಪಾಯಿ ಮಾತ್ರ ಹೆಚ್ಚು ಮಾಡಿದ್ದು, ಇದರಿಂದಾಗಿ ನಮಗೆ ಯಾವುದೇ ರೀತಿಯ ತೃಪ್ತಿ ಆಗಿರುವುದಿಲ್ಲ.
ಎಲ್ಲಾ ದರಗಳು ದುಪ್ಪಟ್ಟು ಆಗಿರುವುದರಿಂದ ಈಗ ಸರ್ಕಾರ ನೀಡುತ್ತಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. 25 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದೆವು, ಕನಿಷ್ಠ ಪಕ್ಷ ಎಂಟರಿಂದ ಹತ್ತು ಸಾವಿರ ರೂಪಾಯಿ ಆದರೂ ಹೆಚ್ಚು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸಲಾಗಿದ್ದು, ನಮ್ಮ ಸಂಘಟನೆ ಶೀಘ್ರದಲ್ಲೇ ಸಭೆಯನ್ನು ಆಯೋಜಿಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಅಂಗನವಾಡಿ ಮತ್ತು ಸಹಾಯಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಳೂಡಿ ಲಲಿತಮ್ಮ, ಉಪಾಧ್ಯಕ್ಷೆ ಸುಧಾ ನಂದಿಗುಡಿ, ಮಂಜುಳಮ್ಮ, ರೇಣುಕಮ್ಮ ಇತರರು ಹಾಜರಿದ್ದರು.