ಇಲ್ಲಿನ ಬಸ್ ನಿಲ್ದಾಣದ ಎದುರಿನ ರಾಜರಾಜೇಶ್ವರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬ ಸಮಾರಂಭವನ್ನು ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಂಯೋಜಕ ಕೆ.ಎನ್. ಪಾಟೀಲ್ ತಿಳಿಸಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಉಪ-ರಾಷ್ಟ್ರಪತಿ ಜಗದೀಪ ಧನಕರ್ ಉದ್ಘಾಟಿಸುವರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅತಿಥಿಗಳು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಶಯ ಭಾಷಣ ಮಾಡುವರು. ಮೈಸೂರ ವಿ.ವಿ. ಕುಲಪತಿ ಎಸ್.ವಿ. ಹಲಸೆ, ಪ್ರಜ್ಞಾ ಪ್ರವಾಹದ ರಘು ನಂದನ ಉಪಸ್ಥಿತರಿದ್ದರು.
ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ಚಿಣ್ಣರ ಗೋಷ್ಠಿ, ಸಂಜೆ ಸಾರ್ವಜನಿಕ ಕಾರ್ಯಕ್ರಮದ ನಂತರ ನಡೆಯುವ ಹಾಸ್ಯ ಸಂಜೆಯಲ್ಲಿ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಭಾಷಣ ನಂತರ ಕಲಾ ಪ್ರದರ್ಶನ ನಡೆಯುವುದು.
ನಾಳೆ ಶನಿವಾರ ಸೂಲಿಬೆಲೆ ಚಕ್ರವರ್ತಿ ಅಧ್ಯಕ್ಷತೆಯಲ್ಲಿ ಯುವ ಗೋಷ್ಠಿ ನಡೆಯುವುದು. ಮದ್ಯಾಹ್ನ ತೇಜಸ್ವಿನಿ ಅನಂತಕುಮಾರ್ ಹಾಗೂ ಅಲಕಾ ಇನಾಮದಾರ ನೇತೃತ್ವದಲ್ಲಿ ಮಹಿಳಾ ಗೋಷ್ಠಿ, ಸಂಜೆ ಸಾರ್ವಜನಿಕ ಕಾರ್ಯಕ್ರಮದ ನಂತರ ಕಲಾ ಪ್ರದರ್ಶನದಲ್ಲಿ ರಾಮು ಮೂಲಗಿ ಅವರಿಂದ ಜನಪದ ಹಾಡುಗಳು.
ನಾಡಿದ್ದು ದಿನಾಂಕ 9 ರಂದು ಬೆಳಿಗ್ಗೆ ಕೃಷಿ ಪದವೀಧರರ ಸಂಘದ ಸಹಯೋಗದಲ್ಲಿ `ಹೊನ್ನ ಬಿತ್ತೇವು ಜಗಕೆಲ್ಲ’ ರೈತ ಗೋಷ್ಠಿಯಲ್ಲಿ ಕಲಬುರ್ಗಿ ವಿಕಾಸ ಅಕಾಡೆಮಿ ಅಧ್ಯಕ್ಷರು ಬಸವರಾಜ ಸೇಡಂ ಭಾಷಣ, ಸಂಜೆ ಸಮಾರೋಪ ಸಮಾರಂಭ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಭಾಗವಹಿಸುವರು. ಪ್ರಜ್ಞಾ ಪ್ರವಾಹದ ಸಂಯೋಜಕ ರಘುನಂದನ ಅವರಿಂದ ಸಮಾರೋಪದ ನುಡಿಗಳು. ನಂತರ ಸಂಗೀತ ಕಲಾವಿದೆ ಸಂಗೀತಾ ಕಟ್ಟಿ ಅವರಿಗೆ `ಸರ್ವಜ್ಞ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಲಿದೆ.