ಮಲೇಬೆನ್ನೂರು, ಫೆ.6- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಾಡಿದ್ದು ದಿನಾಂಕ 8 ಮತ್ತು 9 ರಂದು ಜರುಗಲಿರುವ 7 ನೇ ವರ್ಷದ ವಾಲ್ಮೀಕಿ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶ್ರೀಗಳೇ ಖುದ್ದು ನಿಂತು ಸಿದ್ಧತೆಗಳಿಗೆ ಅಂತಿಮ ರೂಪ ನೀಡಲು ನಿರ್ದೇಶನ ನೀಡುತ್ತಿದ್ದಾರೆ.
ಗುರುವಾರ ಸಂಜೆ ‘ಜನತಾವಾಣಿ’ ಯೊಂದಿಗೆ ಮಾತನಾಡಿದ ಶ್ರೀ ಡಾ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು, ನಾವು ವಾಲ್ಮೀಕಿ ಜಾತ್ರೆಯನ್ನು ಜಾಗೃತಿಗಾಗಿ ಮಾಡುತ್ತಿದ್ದು, ಜಾತ್ರೆ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತಾ ಬಂದಿದ್ದೇವೆ. ಇದರಿಂದ ಕೆಲವು ಒತ್ತಾಯಗಳಿಗೆ ಸ್ಪಂದನೆ ಸಿಕ್ಕಿದೆ. ಈ ವರ್ಷದ ಜಾತ್ರೆಯಲ್ಲಿ ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸುವಂತೆ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹಾಗೂ ನೀಡಿದವರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲಾಗುವುದು.
ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮತ್ತು ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಆಗ್ರಹಿಸಲಾಗುವುದು.
ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣವನ್ನು 9 ಷೆಡ್ಯೂಲ್ಗೆ ಸೇರಿಸುವಂತೆ ಮತ್ತು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಂಡಿ ರುವ ಶ್ರೀರಾಮ ಮಂದಿರದಲ್ಲಿ ವಾಲ್ಮೀಕಿ, ಶಬರಿ, ಭಗೀರಥ, ವಶಿಷ್ಟ ಋಷಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದೆಂದು ಸ್ವಾಮೀಜಿ ತಿಳಿಸಿದರು.
ಕಳೆದ 3 ತಿಂಗಳಲ್ಲಿ 30 ಜಿಲ್ಲೆಗಳ 175 ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ, ಭಕ್ತರನ್ನು ಜಾತ್ರೆಗೆ ಆಹ್ವಾನಿಸಿ ಬಂದಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ವಿಎಸ್ಎಸ್ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಜಾತ್ರೆಯ ಕರಪತ್ರ, ಪೋಸ್ಟರ್ಗಳನ್ನು ತಲುಪಿಸುವುದು ಮತ್ತು ಜಾತ್ರೆಗೆ ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ ಯನ್ನು ಸಂಗ್ರಹಿಸಿ, ಮಠಕ್ಕೆ ತಂದು ಒಪ್ಪಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಸಮಾಜ ನಾಡು-ನುಡಿಗಾಗಿ ಹೋರಾಟ, ಬಲಿದಾನ ಮಾಡಿದ್ದು, ಸ್ವಾತಂತ್ರ್ಯ ನಂತರ ನಮ್ಮ ಜನರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಮೀಸಲಾತಿ, ಶಿಕ್ಷಣ, ರಾಜಕೀಯ ಪ್ರಾತಿನಿಧ್ಯದಿಂದಾಗಿ ನಾಯಕ ಸಮಾಜಕ್ಕೆ ಅನುಕೂಲವಾಗಿದೆ ಎಂದು ಸ್ವಾಮೀಜಿ ಹೇಳಿದರು.
ವಾಲ್ಮೀಕಿ ಜಾತ್ರೆ ಅರ್ಥಪೂರ್ಣ ವಾಗ ಲಿದ್ದು, ಸುಮಾರು 2 ಲಕ್ಷ ಜನ ಜಾತ್ರೆಯ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶನಿವಾರ ವಿವಿಧ ವಿಚಾರ ಗೋಷ್ಠಿಗಳನ್ನು ಹಾಗೂ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದ್ದು, ಭಾನುವಾರ ಬೆಳಿಗ್ಗೆ 9ಕ್ಕೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ವಾಲ್ಮೀಕಿ ರಥೋತ್ಸವದ ನಂತರ ಧಾರ್ಮಿಕ ಸಭೆ ನಡೆಯಲಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆಂದು ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಅಪಾರ ಜಿಲ್ಲಾಧಿಕಾರಿ ಲೋಕೇಶ್, ಡಿಎಫ್ಓ ಶಶಿಧರ್, ವಾಣಿಜ್ಯ ಇಲಾಖೆಯ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್, ಎಸಿಎಫ್ ಭರತ್, ಜಿಲ್ಲಾ ಎಸ್ಟಿ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಮಠದ್, ಜಾತ್ರಾ ಸಮಿತಿ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ, ಮಠದ ಧರ್ಮದರ್ಶಿಗಳಾದ ಹೊಸಪೇಟೆ ಜಂಬಯ್ಯ ನಾಯಕ, ಶಾಂತಾ ಸುರುಪುರ, ಕೆ.ಬಿ.ಮಂಜುನಾಥ್, ನಿವೃತ್ತ ಶಿಕ್ಷಕ ಜಿ ಆರ್ ನಾಗರಾಜ್, ರಾಜನಹಳ್ಳಿ ಭೀಮಣ್ಣ, ಪತ್ರಕರ್ತ ಪ್ರಕಾಶ್ ಮತ್ತಿತರರು ಈ ವೇಳೆ ಹಾಜರಿದ್ದರು.