ಹರಪನಹಳ್ಳಿ,ಫೆ.5- ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಸದಿರುವುದನ್ನು ಖಂಡಿಸಿ ವಿವಿಧ ಇಲಾಖೆಯ ಸರ್ಕಾರಿ ನೌಕರರು ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿ ರುವ ಸಂಘದ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.
2024-29ರ ಅವಧಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಈಗಾಗಲೇ ರಾಜ್ಯದಾದ್ಯಂತ ನಡೆದು ಕಾರ್ಯಕಾರಿ ಸಮಿತಿ ರಚನೆಯಾಗಿ ಹಲವು ತಿಂಗಳುಗಳೇ ಕಳೆದಿವೆ, ಆದರೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಮಾತ್ರ ಚುನಾವಣೆ ನಡೆಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಂಬಂಧ ಈಗಾಗಲೇ ಹರಪನ ಹಳ್ಳಿ ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರು ಸೇರಿ ಹಲವಾರು ಬಾರಿ ಹೋರಾಟಗಳನ್ನು ಮಾಡಿ, ರಾಜ್ಯ ಚುನಾವಣಾಧಿಕಾರಿಗಳು, ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಎಸ್.ರಾಮಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಂದೋಳ್ ಸಿದ್ದೇಶ, ಪತ್ತಿನ ಬ್ಯಾಂಕಿನ ಅಧ್ಯಕ್ಷ ಜುಂಜಪ್ಪ, ಪದ್ಮರಾಜ್ ಜೈನ್, ವೃಷಭೇಂದ್ರ, ಬಿ.ಚಂದ್ರಮೌಳಿ, ಕಾಟಿ ಹನುಮಂತಪ್ಪ, ಬಿ.ರಾಜಶೇಖರ್, ಎಂ.ಪ್ರಭು, ಪದ್ಮಲತಾ, ಪೂಜಾರ ಹನುಮಂತಪ್ಪ, ಸಾರಥಿ ಹನುಮಂತಪ್ಪ ಸೇರಿದಂತೆ ಮತ್ತಿತರರಿದ್ದರು.