ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಸಂಕ್ರಾಂತಿ

ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಸಂಕ್ರಾಂತಿ

ಮಲೇಬೆನ್ನೂರು, ಜ.14- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಆಚರಣೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದಾಖಲೆ ಬರೆದರು.

ದೇವಸ್ಥಾನದಲ್ಲಿ ಪ್ರಾತಃ ಕಾಲದಲ್ಲಿ ಎಲ್ಲಾ ದೇವರುಗಳಿಗೆ ಅಭಿಷೇಕ ನೆರವೇರಿಸಿ, ನಂತರ ದೇವಸ್ಥಾನದ ಪ್ರಧಾನ ಅರ್ಚಕ ಬೆನಕಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಆದಿತ್ಯ ಸೂರ್ಯ ಪಾರಾಯಣ ಹೋಮ ನಡೆಸಿ, ಪೂರ್ಣಾಹುತಿ ನೀಡಲಾಯಿತು.

ಸಾಮೂಹಿಕ ಶ್ರೀ ಸತ್ಯನಾರಾ ಯಣ ಪೂಜೆಯನ್ನೂ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಶಿಷ್ಯರು ನಡೆಸಿಕೊಟ್ಟ ಸಂಗೀತಯುತ ಸತ್ಸಂಗ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಮ್ಮ, ಶ್ರೀ ಮಹಾಗಣಪತಿ, ಶ್ರೀ ನಾಗ ಪರಿವಾರ, ಶ್ರೀ ಕಾಳಭೈರವನ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ ಕೆಲಹೊತ್ತು ದೇವಸ್ಥಾನದ ಮುಂಭಾಗ ಶಿವಮೊಗ್ಗ ರಸ್ತೆಯಲ್ಲಿ ನೂರಾರು ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.

ಪೊಂಗಲ್, ಪಾಯಿಸ, ರೊಟ್ಟಿ, ಚಟ್ನಿಪುಡಿ, 4 ಪಲ್ಯಗಳು, ಬೆಣ್ಣೆದೋಸೆ, ಕೊಬ್ಬರಿ ಚಟ್ನಿ, ಅನ್ನ-ಸಾಂಬಾರು, ಮೊಸರು, ಮೆಣಸಿನಕಾಯಿ ಒಳಗೊಂಡ ಸಂಕ್ರಾಂತಿಯ ವಿಶೇಷ ಪ್ರಸಾದದ ವ್ಯವಸ್ಥೆಯನ್ನು ಆಗಮಿಸಿದ್ದ ಎಲ್ಲಾ ಭಕ್ತರಿಗೂ ಬಹಳ ವ್ಯವಸ್ಥಿತವಾಗಿ ಮಾಡಲಾಗಿತ್ತು.

ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಸೇರಿದಂತೆ ಇನ್ನೂ ಅನೇಕ ಪ್ರಮುಖರು ದೇವಸ್ಥಾನಕ್ಕೆ ಆಗಮಿಸಿದ್ದರು.

ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಿ.ಪಂಚಪ್ಪ, ಉಪಾಧ್ಯಕ್ಷ ಬಿ.ಚಿದಾನಂದಪ್ಪ, ಬಿ.ನಾಗೇಂದ್ರಪ್ಪ, ಖಜಾಂಚಿ ಬಿ.ವಿ.ರುದ್ರೇಶ್, ಬಿ.ಮಹಾರುದ್ರಪ್ಪ, ಎನ್.ಕೆ.ವೃಷಭೇಂದ್ರಪ್ಪ, ಬಿ.ಮಲ್ಲಿಕಾರ್ಜುನ್, ಬಿ.ನಾಗೇಶ್, ಬಿ.ಉಮಾಶಂಕರ್, ಬಿ.ಎನ್.ರುದ್ರೇಶ್, ಬಿ.ಸಿ.ಸತೀಶ್, ಬಿ.ಎಂ.ಹರ್ಷ, ಎನ್.ಕೆ.ಬಸವರಾಜ್, ಎಸ್.ಎನ್.ಶಂಭುಲಿಂಗಪ್ಪ, ಎಸ್.ವಿ.ಶಂಭಣ್ಣ, ಎಲ್ಐಸಿ ಪ್ರಕಾಶ್, ಉಪನ್ಯಾಸಕ ಹೊನ್ನಾಳಿ ಗಂಗಾಧರ್ ಸೇರಿದಂತೆ ನೂರಾರು ಸ್ವಯಂ ಸೇವಕರು ಹಾಜರಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು.

ಈಶ್ವರೀಯ ಸಂದೇಶ : ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವನ ಸಂದೇಶ, ರಾಜಯೋಗದ ಬಗ್ಗೆ ಭಕ್ತರಿಗೆ ತಿಳಿಸುವ ಕೆಲಸವನ್ನು ಮಲೇಬೆನ್ನೂರು ಕೇಂದ್ರದ ಸಂಚಾಲಕರು, ವಿದ್ಯಾರ್ಥಿಗಳು ಮಾಡಿ ಗಮನ ಸೆಳೆದರು. 

ರಕ್ತದಾನ ಶಿಬಿರ : ಮಲೇಬೆನ್ನೂರು ಲಯನ್ಸ್ ಕ್ಲಬ್ ವತಿಯಿಂದ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಿದ್ದರು.

error: Content is protected !!