ರಾಣೇಬೆನ್ನೂರು `ಮೆಗಾ ಮಾರ್ಕೆಟ್‌’ಗಿಲ್ಲ ಮುಕ್ತಿ !

ರಾಣೇಬೆನ್ನೂರು `ಮೆಗಾ ಮಾರ್ಕೆಟ್‌’ಗಿಲ್ಲ ಮುಕ್ತಿ !

ರಾಣೇಬೆನ್ನೂರು, ಜ.8- ತಾಲ್ಲೂಕಿನ ಹೂಲಿಹಳ್ಳಿ ಹಾಗೂ ಕೂನಬೇವು ಗ್ರಾಮಗಳ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರಾಣೇಬೆನ್ನೂರು ಕೃಷಿ ಉತ್ಪನ್ನ ಮಾರಾಟ ಸಮಿತಿಯ ಮೆಗಾ ಮಾರುಕಟ್ಟೆ ನಿರ್ಮಾಣಗೊಂಡು ಎರಡು ವರ್ಷಗಳಾಗುತ್ತಾ ಬಂದರೂ ಅಲ್ಲಿ ವ್ಯಾಪಾರ-ವಹಿವಾಟು ನಡೆಸುವ ಭಾಗ್ಯ ದೊರಕುತ್ತಿಲ್ಲ.

ಈಗಿರುವ ಮಾರುಕಟ್ಟೆಯಲ್ಲಿನ ದಟ್ಟಣೆ ಹಾಗೂ ವಿವಿಧ ಸೌಲಭ್ಯಗಳ ಅಗತ್ಯತೆಗಳನ್ನು ಮನಗಂಡು, ಜೊತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬರುವ ರೈತರಿಗೆ ಒಂದೇ ಸೂರಿನಡಿ ತಮ್ಮ ಬೆಳೆಗಳ ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗಲೆನ್ನುವ ಉದ್ಧೇಶದೊಂದಿಗೆ  222 ಎಕರೆ ಜಮೀನಿನಲ್ಲಿ 522 ನಿವೇಶನಗಳನ್ನು ಮಾರ್ಪಡಿಸಿ 129 ಕೋಟಿ ವೆಚ್ಚದ ಮೆಗಾ ಮಾರ್ಕೆಟ್ ನಿರ್ಮಿಸುವ  ಈ ಯೋಜನೆ 2019 ಪ್ರಾರಂಭಗೊಂಡಿದ್ದು 2022 ರಲ್ಲಿ ಪೂರ್ಣಗೊಂಡಿರುವುದಾಗಿ ಹೇಳಲಾಗುತ್ತಿದೆ.

ಮುಖ್ಯ ರಸ್ತೆಯ ಎರಡು ಕಡೆ ಉದ್ಯಾನವನ, ಕಾಂಕ್ರೀಟ್ ರಸ್ತೆ, ಚರಂಡಿ, ಹರಾಜು ಕಟ್ಟೆ, ಟೆಂಡರ್ ಕೊಠಡಿ, ರೈತ ಭವನ, ಮಳಿಗೆಗಳು, ಮಾಹಿತಿ ಕೇಂದ್ರ, ಶ್ರಮಿಕ ಭವನ, ಅತಿಥಿ ಗೃಹ, ಉಪಹಾರ ಗೃಹ, ಪ್ರಯೋಗಾಲಯ, ಕೃಷಿ ಉತ್ಪನ್ನ ಒಣಗಿಸುವ ಕಟ್ಟೆ, ಶೌಚಾಲಯ ಸೇರಿದಂತೆ ಅವಶ್ಯ ಕಟ್ಟಡಗಳು ನಿರ್ಮಾಣಗೊಂಡಿವೆ. ಜೊತೆಗೆ ಮೊದಲೇ ನಿರ್ಮಾಣಗೊಂಡು ಮಳೆಯ ನೀರು ತುಂಬಿಕೊಂಡ ಎರಡು ದೊಡ್ಡ ಕಲ್ಲುಗಳ ಕ್ವಾರಿಗಳಿವೆ.  

ಉದ್ಘಾಟನೆ ಆಗದಿದ್ದರಿಂದ ಇಲ್ಲಿ ದಾತಿಕರಾರು ಇಲ್ಲದ್ದರಿಂದ ಮಂಗಗಳು ಒಳನುಗ್ಗಿದ್ದು ಅವು ಹೊರಬರಲಾರದೆ ಅಲ್ಲಿಯೇ ಸತ್ತು, ಕಲುಷಿತ ವಾತಾವರಣ ನಿರ್ಮಾಣ ಗೊಂಡ ಬಗ್ಗೆ ಹೇಳಲಾಗುತ್ತಿದೆ.  ರಸ್ತೆ, ಆಡಳಿತ ಕಟ್ಟಡಗಳ ಬಳಿ ಗಿಡ- ಗಂಟೆಗಳು ಬೆಳೆದಿದ್ದು, ಹುಲ್ಲುಗಾವಲು ಪ್ರದೇಶ ನಿರ್ಮಾಣವಾಗಿದೆ. ಕಿಟಕಿ ಗಾಜುಗಳು ಒಡೆದಿವೆ. ಕಟ್ಟಡಗಳು ಪಾರಿವಾಳಗಳ ವಾಸಸ್ಥಾನಗಳಾಗಿವೆ ಇನ್ನಷ್ಟು ಹಾಳಾಗುವ ಮೊದಲು ಸಂಬಂಧಪಟ್ಟವರು ಎಚ್ಚರಗೊಳ್ಳಬೇಕಿದೆ.

error: Content is protected !!