ಜಿಗಳಿ: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆಯಲ್ಲಿ ಡಯಟ್ ಉಪನ್ಯಾಸಕಿ ಪೂರ್ಣಿಮಾ
ಮಲೇಬೆನ್ನೂರು, ಡಿ. 22- ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಎಸ್ಡಿಎಂಸಿ, ಪೋಷಕರು ಮತ್ತು ಗ್ರಾಮಸ್ಥರು ಶ್ರಮವಹಿಸಬೇಕೆಂದು ದಾವಣಗೆರೆ ಡಯಟ್ ಉಪನ್ಯಾಸಕರು ಹಾಗೂ ಬೈಲಿಗಲ್ ಭಾಷಾ ಆಂಗ್ಲ ಮಾಧ್ಯಮ ಶಾಲೆಗಳ ಜಿಲ್ಲಾ ನೋಡಲ್ ಅಧಿಕಾರಿ ಶ್ರೀಮತಿ ಪೂರ್ಣಿಮಾ ಮನವಿ ಮಾಡಿದರು.
ಜಿಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ 1ನೇ ತರಗತಿಯನ್ನು ಆಂಗ್ಲ ಮಾಧ್ಯಮ ತರಗತಿ ಯನ್ನಾಗಿ ಪ್ರಾರಂಭಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖಾಸಗಿ ಶಾಲೆಗಳನ್ನು ಹಿಂದಿಕ್ಕಲು ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು. ಈ ನಿಟ್ಟಿಲ್ಲಿ ಸರ್ಕಾರ ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯನ್ನು ಆಂಗ್ಲ ಮಾಧ್ಯಮ ತರಗತಿಗಳನ್ನಾಗಿ ಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ 34 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿದ್ದೇವೆ ಎಂದು ಪೂರ್ಣಿಮಾ ತಿಳಿಸಿದರು.
ಕನ್ನಡ ನಮ್ಮ ಮಾತೃಭಾಷೆ ಮತ್ತು ಪ್ರಥಮ ಭಾಷೆಯಾಗಿದ್ದು, ಹಿಂದಿ ಮತ್ತು ಇಂಗ್ಲೀಷ್ ಅನ್ನು ದ್ವಿತೀಯ ಭಾಷೆಯಾಗಿ ಕಲಿಯುವುದು ಅತ್ಯವಶ್ಯಕವಾಗಿದೆ. ನಿಮ್ಮ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿರುವ ಬಗ್ಗೆ ಪ್ರತಿ ಮನೆಗೂ ತಿಳಿಸಿ, ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಎಸ್ಡಿಎಂಸಿಯವರು ಶ್ರಮಿಸಬೇಕು ಎಂದು ಪೂರ್ಣಿಮಾ ಹೇಳಿದರು.
ಆಂಗ್ಲ ಮಾಧ್ಯಮ ತರಗತಿಗಾಗಿ ಸಿದ್ಧಪಡಿಸಿರುವ ವಿಶೇಷ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಅವರು, ಮಕ್ಕಳು ಶಾಲೆಯಲ್ಲಷ್ಟೇ ಓದಿದರೆ ಸಾಲದು, ಮನೆಯಲ್ಲೂ ಪೋಷಕರು ಮಕ್ಕಳ ಕಲಿಕೆ ಬಗ್ಗೆ ಕಾಳಜಿ ವಹಿಸಬೇಕೆಂದರು.
ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ತಾಯಿಯ ಸ್ಥಾನ ಬಹಳ ಮುಖ್ಯವಾಗಿದ್ದು, ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಪೋಷಕರು, ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು. ಮಕ್ಕಳನ್ನು ಮೊಬೈಲ್ನಿಂದ ದೂರ ಇಡಬೇಕು. ಕ್ರಿಕೆಟ್ ಜೊತೆಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಮಕ್ಕ ಳಿಗೆ ಹೇಳಿಕೊಡಬೇಕೆಂದ ದುರುಗಪ್ಪ ಅವರು, ಕಳೆದ 2 ವರ್ಷಗಳಿಂದ ಎಸ್ಡಿಎಂಸಿಯಿಂದಲೇ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹರಿಹರ ತಾಲ್ಲೂಕಿನ ಹನಗವಾಡಿ, ದೇವರಬೆಳಕೆರೆ, ನಂದಿತಾವರೆ, ಕೆ. ಬೇವಿನಹಳ್ಳಿ ಗ್ರಾಮಗಳಲ್ಲಿ ಈಗಾಗಲೇ ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿದ್ದು, ಈ ದಿನ ಜಿಗಳಿ ಮತ್ತು ಕೆ.ಎನ್. ಹಳ್ಳಿಯಲ್ಲಿ ಪ್ರಾರಂಭವಾಗಿವೆ ಎಂದು ಬೈಲಿಗಲ್ ಆಂಗ್ಲ ಭಾಷಾ ಮಾಧ್ಯಮ ಶಾಲೆಗಳ ಹರಿಹರ ತಾ. ನೋಡಲ್ ಅಧಿಕಾರಿ ಭಾಗ್ಯಲಕ್ಷ್ಮಿತಿಳಿಸಿದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳೂ ಇಂಗ್ಲೀಷ್ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಸರ್ಕಾರಿ ಶಾಲೆಗಳ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಪ್ರಕಾಶ್ ಮಾತನಾಡಿ, ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟು ನಂತರ ಇಂಗ್ಲೀಷ್ ಕಲಿಸಬೇಕು. ನಮ್ಮ ಶಾಲೆಯ ಮಕ್ಕಳ ಪ್ರಗತಿ ನಮ್ಮ ಗ್ರಾಮಕ್ಕೆ ಹೆಮ್ಮೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಗಂಗಾಧರಚಾರಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಇಸಿಓಗಳಾದ ಬಸವರಾಜಪ್ಪ, ಹರೀಶ್ ನೋಟಗಾರ್, ಸಿಆರ್ಪಿಗಳಾದ ನಂಜುಂಡಪ್ಪ, ಸತೀಶ್, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಜಿ.ಆರ್. ಚಂದ್ರಪ್ಪ, ಬಿ. ಪ್ರಭಾಕರ್, ವಿಜಯ ಭಾಸ್ಕರ್, ಎನ್. ಕಲ್ಲೇಶ್, ಟಿ. ನಾಗರಾಜ್, ಪಿಎಸಿಎಸ್ ಮಾಜಿ ಅಧ್ಯಕ್ಷ ಬಿ. ನಿಂಗಾಚಾರಿ, ಕಲಾವಿದ ಡಿ.ರಂಗನಾಥ್ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.
ಪ್ರಭಾರಿ ಮುಖ್ಯ ಶಿಕ್ಷಕ ಲಿಂಗರಾಜ್ ಸ್ವಾತಿಸಿದರು. ಶಿಕ್ಷಕ ಗುಡ್ಡಪ್ಪ ನಿರೂಪಿಸಿದರೆ, ಶಿಕ್ಷಕ ಮಲ್ಲಿಕಾರ್ಜುನ್ ವಂದಿಸಿದರು. ಶಿಕ್ಷಕರಾದ ಲೋಕೇಶ್, ಶ್ರೀನಿವಾಸ್ ರೆಡ್ಡಿ, ಜಯಶ್ರೀ, ಕರಿಬಸಮ್ಮ ಇದ್ದರು.