ಅಧಿವೇಶನದಲ್ಲಿ ಶಾಸಕ ಟಿ. ರಘುಮೂರ್ತಿ ಮನವಿ
ಚಳ್ಳಕೆರೆ, ಡಿ. 18- ಇಲ್ಲಿನ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಕೆಯಾದ ಕ್ರೀಡಾಂಗಣ ನಿರ್ಮಾಣಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ದಲ್ಲಿ ಶಾಸಕ ರಘುಮೂರ್ತಿ ಪ್ರಸ್ತಾಪಿಸಿದ್ದಾರೆ.
ಕಳೆದ ವಾರವಷ್ಟೇ ಬೆಳಗಾವಿ ಅಧಿವೇಶನದಲ್ಲಿ ನಗರದ ಯುಜಿಡಿ ಕಾಮಗಾರಿಗೆ 260 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಒತ್ತಾಯ ಪಡಿಸಿದ ಬೆನ್ನ ಹಿಂದೆಯೇ ಮತ್ತೊಮ್ಮೆ ಡಿ. 17ರ ಕಲಾಪದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ ನಗರದ ಪಾವಗಡ ರಸ್ತೆಯಲ್ಲಿರುವ ಕ್ರೀಡಾಂಗಣಕ್ಕೆ 7.60 ಕೋಟಿ ರೂ. ಬಿಡಗಡೆ ಮಾಡುವಂತೆ ಅಧಿವೇಶನದಲ್ಲಿ ಒತ್ತಾಯ ಮಾಡಲಾಯಿತು.
ನಗರದ ಪಾವಗಡ ರಸ್ತೆಯ ರಿ. ಸರ್ವೆ ನಂ. 62ರಲ್ಲಿ 9.36 ಎಕರೆ ಜಮೀನಿನಲ್ಲಿ 6 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲು ಸಿದ್ಧತೆ ನಡೆದಿದ್ದು 2016-12ರಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿತ್ತು. ಕೆಐರ್‌ಡಿಎಎಲ್ ವತಿಯಿಂದ ಕಾಮಗಾರಿ ಕೈಗೊಂಡು ಸದ್ಯದ ಸ್ಥಿತಿಯಲ್ಲಿ ಕ್ರೀಡಾಂಗಣದ ಸುತ್ತ ಬೇಲಿ ಹಾಕಲಾಗಿದೆ. ಉಳಿದಂತೆ ಬಾಸ್ಕೆಟ್ ಬಾಲ್ ಅಂಕಣ, ನೀರಿನ ಸೌಲಭ್ಯ, ಪ್ರೇಕ್ಷಕರ ಗ್ಯಾಲರಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು 7.60 ಕೋಟಿ ರೂ. ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಕ್ರೀಡಾಂಗಣ ಮಾಡುವ ಕುರಿತು ಈಗಾಗಲೇ 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾಕರದ ಆರ್ಥಿಕ ಸ್ಥಿತಿಗತಿ ನೋಡಿ ಹಣ ಬಿಡುಗಡೆಗೊಳಿಸಲು ಭರವಸೆ ನೀಡಿದರು.