ಐಕಾಂತಿಕ: ನೈಸರ್ಗಿಕ ಕೃಷಿಯಲ್ಲಿ ಬೆಳೆದ ಭತ್ತ

ಐಕಾಂತಿಕ: ನೈಸರ್ಗಿಕ ಕೃಷಿಯಲ್ಲಿ ಬೆಳೆದ ಭತ್ತ

ಭತ್ತ ಮಾರಾಟಕ್ಕಿಂತ ಅಕ್ಕಿ ತಯಾರಿಸಿ ಮಾರಾಟ ಮಾಡಿದರೆ ಹೆಚ್ಚು ಲಾಭ

– ನೈಸರ್ಗಿಕ ಕೃಷಿಕ ರಾಘವ

ಮಲೇಬೆನ್ನೂರು, ಡಿ. 16- ರೈತರು ಸರ್ಕಾರ ಘೋಷಿಸುವ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆಗಳಿಗೆ ಕಾಯದೆ, ರಸಗೊಬ್ಬರ, ಕೀಟನಾಶಕ ಬಳಸದೇ, ಸಾವಯವ, ನೈಸರ್ಗಿಕ, ಸಹಜ ಕೃಷಿ ಪದ್ಧತಿಯಲ್ಲಿ ವಿಷಮುಕ್ತ ಭತ್ತ ಬೆಳೆದು ಆ ಭತ್ತವನ್ನು ರೈತರೇ ಅಕ್ಕಿ ತಯಾರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ನೈಸರ್ಗಿಕ ಕೃಷಿಕ ರಾಘವ ಹೇಳಿದರು.

ಇತ್ತೀಚೆಗೆ ಮಲ್ಲನಾಯ್ಕನಹಳ್ಳಿ ಗ್ರಾಮದ ಬಳಿ ಇರುವ ಶ್ರೀನಿವಾಸನಗರ ಕ್ಯಾಂಪಿನ ಐಕಾಂತಿಕ ಹೆಸರಿನ ನೈಸರ್ಗಿಕ ಕೋಟಾ ಮತ್ತು ಭತ್ತದ ಗದ್ದೆ ಇರುವ ಪ್ರದೇಶದಲ್ಲಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ತಾವೇ ಬೆಳೆದ ವಿಷಮುಕ್ತ ಭತ್ತದ ಬೆಳೆಯನ್ನು ಆಗಮಿಸಿದ್ದ ಆಸಕ್ತ ರೈತರಿಗೆ ತೋರಿಸಿ ಅವರು ಮಾತನಾಡಿದರು.

ರಸಗೊಬ್ಬರ ಹಾಗೂ ಕೀಟನಾಶಕ ಬಳಸದೆ, ಕಳೆ ನಿರ್ವಹಣೆ ಮಾಡದೆ, ನಾಟಿ ಮಾಡದೆ,ನೀರು ನಿಲ್ಲಿಸದೆ, ಪಾರಂಪರಿಕ ದೇಶೀ ಭತ್ತದ ಬೀಜಗಳನ್ನು ಗದ್ದೆಯಲ್ಲಿ ಹಾಕಿ, ಕಡಿಮೆ ವೆಚ್ಚದಲ್ಲಿ ವಿಷಮುಕ್ತ ಭತ್ತದ ಬೆಳೆಯನ್ನು ಹೇಗೆ ಬೆಳೆದಿದ್ದೇನೆಂದು ಎಲ್ಲರಿಗೂ ವಿವರವಾಗಿ ತಿಳಿಸಿಕೊಟ್ಟರು.

ಪ್ರತಿ ಬೆಳೆಯು ಸಹಜ ಕೃಷಿಯಲ್ಲಿ ಒಂದು ಎಕರೆಗೆ ಸುಮಾರು 14 ಸಾವಿರ ರೂ. ಖರ್ಚು ಮಾಡಿ, 20 ರಿಂದ 25 ಚೀಲದವರೆಗೆ ಭತ್ತದ ಇಳುವರಿ ಪಡೆದಿದ್ದೇನೆ. ಬಳಿಕ ಮಿಲ್‌ನಲ್ಲಿ ಭತ್ತದಿಂದ ಅಕ್ಕಿ ಬಿಡಿಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದ್ದೇನೆ ಎಂದು ರಾಘವ ತಿಳಿಸಿದರು.

ಇಳುವರಿ ಹೆಚ್ಚುಬೇಕೆಂದು ರೈತರು, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ರೈತರು ಪರೋಕ್ಷವಾಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಕೆಲಸ ಮಾಡುತ್ತಿದ್ದು, ನಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ರಾಘವ ಅವರು,  `ದೇಶೀ ಭತ್ತ ದೀರ್ಘಾವಧಿ ತಳಿಯಾಗಿದ್ದು, ಮೊದಲು ಭದ್ರಾ ಡ್ಯಾಂನಿಂದ ನಾಲೆಗೆ 140ರಿಂದ 150 ದಿನಗಳವರೆಗೆ ನೀರು ಬಿಡುತ್ತಿದ್ದರು. ಆಗ ರೈತರು ದೀರ್ಘಾವಧಿ ತಳಿ ಭತ್ತ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾಲೆಗೆ 120 ದಿನ ನೀರು ಬಿಡುವುದರಿಂದ ರೈತರು ಅಲ್ಪಾವಧಿ ತಳಿ ಭತ್ತ ಬೆಳೆಯುತ್ತಿದ್ದಾರೆ. ತಳಿಯ ನಿರ್ಧಾರ ಕಾಡಾ ಸಭೆಯ ಮೇಲೆ ಅವಲಂಬನೆಯಾಗಿದೆ’ ಎಂದರು.

ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ನಾನೂ ಸಹ ಈ ಸಲ ಒಂದೂವರೆ ಎಕರೆಯಷ್ಟು ಸಹಜ ಕೃಷಿ ಪದ್ಧತಿಯಲ್ಲಿ ದೇಶೀ ತಳಿ ಭತ್ತ ಬೆಳೆದಿದ್ದೇನೆ. ಈ ಪದ್ಧತಿಯಲ್ಲಿ ಬೆಳೆದ ಅಕ್ಕಿಯ ಊಟ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯವೇ ಭಾಗ್ಯವೆಂದ ಮೇಲೆ ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಸಹಜ ಕೃಷಿಯ ರೈತ ವಿಜ್ಞಾನಿ ನಂದೀಶ್, ಕೃಷಿ ವಿಜ್ಞಾನಿಗಳಾದ ಹನುಮಂತಪ್ಪ, ಶಂಭುಲಿಂಗ, ಸುಜಿತ್, ಮಧುಕರ್, ಅಭೀಶೇಕ್, ರುದ್ರೇಶ್, ಕೆವಿಕೆ ವಿಜ್ಞಾನಿಗಳಾದ ಡಾ.ದೇವರಾಜ, ಟಿ.ಎನ್, ಮಲ್ಲಿಕಾರ್ಜುನ ಬಿ.ಒ., ಅವಿನಾಶ್, ಕೃಷಿ ಇಲಾಖೆಯ ಪ್ರವೀಣ್, ದಾವಣಗೆರೆ, ದಕ್ಷಿಣ ಕನ್ನಡ, ರಾಮನಗರ, ಶಿವಮೊಗ್ಗ, ಹಾವೇರಿ ಮತ್ತಿತರೆ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

error: Content is protected !!