ದಾವಣಗೆರೆ, ಡಿ.2- ನಗರದ ಆರೈಕೆ ಆಸ್ಪತ್ರೆಯಲ್ಲಿ ಆರ್ಥೋಪಿಡಿಕ್ ವಿಭಾಗವನ್ನು ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಇಂದು ಪ್ರಾರಂಭಿಸಲಾಯಿತು. ಆರ್ಥೋ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಉತ್ತಮ ಶಸ್ತ್ರ ಚಿಕಿತ್ಸೆಗೆ ಸೌಲಭ್ಯ ಹೊಂದಿದೆ. ವಿಶೇಷವಾಗಿ ಕೃತಕ ಮಂಡಿ, ಹಿಪ್ ಬದಲಾವಣೆ ಮತ್ತು ರೋಬೋಟಿಕ್ ಜಾಯಿಂಟ್ ಶಸ್ತ್ರ ಚಿಕಿತ್ಸೆಗಳನ್ನು ಒಳಗೊಂಡಿದೆ.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ|| ಟಿ.ಜಿ. ರವಿಕುಮಾರ್, ಇನ್ನು ಮುಂದೆ ಪ್ರತಿ ತಿಂಗಳು ಮೊದಲನೇ ಸೋಮವಾರ ಡಾ|| ಪಿ.ಸಿ. ಜಗದೀಶ್ ಆರೈಕೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅವರು 23 ವರ್ಷಗಳ ವೃತ್ತಿ ಅನುಭವದಲ್ಲಿ 9 ಸಾವಿರ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ, 2500ಕ್ಕೂ ಹೆಚ್ಚು ಭುಜಗಳ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿರುವ ಇವರು ಕೀಲು ಬದಲಾವಣೆಯಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ಶ್ಲ್ಯಾಘಿಸಿದರು.
ಕಾವೇರಿ ಆಸ್ಪತ್ರೆ ತಜ್ಞ ಡಾ|| ಪಿ.ಸಿ. ಜಗದೀಶ್ ಮಾತನಾಡಿ, ತಂತ್ರಜ್ಞಾನ ಸಹಿತ ಶಸ್ತ್ರ ಚಿಕಿತ್ಸೆ ಸೌಲಭ್ಯಗಳು ಆರೈಕೆ ಆಸ್ಪತ್ರೆಯಲ್ಲಿ ದೊರೆಯಲಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೈಕೆ ಆಸ್ಪತ್ರೆಯ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.