ಹರಿಹರ, ಡಿ.2- ನಗರದ ಹಿಂದೂ ರುದ್ರಭೂಮಿ ಬಳಿ ವಿದ್ಯುತ್ ಕಂಬಕ್ಕೆ ಅಡ್ಡಲಾಗಿ ಬೆಳೆದಿದ್ದ ಮರಗಳನ್ನು ಕಡಿದು ಎಲ್ಲೆಂದರಲ್ಲಿ ಹಾಕಿರುವುದರಿಂದ ಅಲ್ಲಿ ಶವ ಸಂಸ್ಕಾರ ನಡೆಸಲು ತೊಂದರೆ ಪಡುವಂತಾಗಿದೆ.
ರುದ್ರಭೂಮಿ ಬಹಳಷ್ಟು ಅವ್ಯವಸ್ಥೆಯ ಗೂಡಾಗಿದ್ದು, ಎಲ್ಲೆಂದರಲ್ಲಿ ಉಪಯೋಗಕ್ಕೆ ಬಾರದ ಗಿಡಗಳು ಬೆಳೆದಿದ್ದು ಮತ್ತು ಅಲ್ಲಲ್ಲಿ ಕಸದ ರಾಶಿ ಇರುವುದರಿಂದ ಶವ ಸಂಸ್ಕಾರದ ಗುದ್ದು ತೆಗೆಯಲು ಸ್ಥಳ ಇಲ್ಲದಂತೆ ಆಗಿದೆ. ಕೆಲವು ಸ್ಥಳಗಳಲ್ಲಿ ನೀರಿನ ಗುಂಡಿಗಳು ಇವೆ. ಇಲ್ಲಿನ ಮರದ ಮೇಲೆ ಹೈ-ಟೆನ್ಷನ್ ವಿದ್ಯುತ್ ವೈರ್ಗಳು ಹಾದು ಹೋಗಿವೆ. ಅಂತ್ಯಕ್ರಿಯೆಗೆ ಹೋದಂತಹ ಸಾರ್ವಜನಿಕರು ಮರವನ್ನು ಮುಟ್ಟಿದಾಗ ವಿದ್ಯುತ್ ಸ್ಪರ್ಶವಾಗುವ ಸಾಧ್ಯತೆ ಕೂಡ ಇರುತ್ತದೆ.
ಸ್ಥಳದ ಉಸ್ತುವಾರಿ ನೋಡಿಕೊಳ್ಳಲು ಮತ್ತು ಅಂತ್ಯಕ್ರಿಯೆಗೆ ಗುದ್ದು ತೆಗೆಯುವುದಕ್ಕೆ ನೀಲಪ್ಪ ಎಂಬುವರನ್ನು ನೇಮಕ ಮಾಡಿದ್ದು, ಆದರೆ ಈ ಕಾರ್ಮಿಕ ನಗರದ ಕೆಲವು ಬಡಾವಣೆಯಲ್ಲಿ ಬೆಳಗ್ಗೆ ಕಸ ತೆಗೆಯುವ ಕೆಲಸವನ್ನು ಮಾಡಿಕೊಂಡು ನಂತರ ಇಲ್ಲಿನ ಕೆಲಸವನ್ನು ನಿಭಾಯಿಸುವುದರಿಂದ, ಆ ಒಬ್ಬ ಕಾರ್ಮಿಕನಿಂದ ಎಲ್ಲವನ್ನೂ ನಿಭಾಯಿಸಲು ಕಷ್ಟವಾಗುತ್ತದೆ.
ಇಲ್ಲಿನ ರುದ್ರಭೂಮಿ ಬಹಳಷ್ಟು ಚಿಕ್ಕದಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ರುದ್ರಭೂಮಿ ಯನ್ನು ನಿರ್ಮಾಣ ಮಾಡಬೇಕು. ಆದರೆ ಕಳೆದ 60, 70 ವರ್ಷಗಳಿಂದ ಇದೇ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದಾರೆ. ಜನಸಂಖ್ಯೆ ದುಪ್ಪಟ್ಟು ಆಗಿದ್ದರೂ ಸಹ ಇದುವರೆಗೂ ಹೊಸದಾಗಿ ರುದ್ರಭೂಮಿ ನಿರ್ಮಾಣ ಮಾಡದೇ ಇರುವುದರಿಂದ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಆದ್ದರಿಂದ ಸ್ಥಳಿಯ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಮತ್ತು ಜನಪ್ರತಿನಿಧಿಗಳು ರುದ್ರಭೂಮಿ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕಿದೆ.