ಜಿಗಳಿ : ಮಕ್ಕಳ ಹಕ್ಕುಗಳ ಜಾಗೃತಿಯಲ್ಲಿ ಶಿಕ್ಷಕ ಮಲ್ಲಿಕಾರ್ಜುನ್ ಮನವಿ
ಮಲೇಬೆನ್ನೂರು, ನ.25- ವಿಶ್ವಸಂಸ್ಥೆ ಮಕ್ಕಳಿಗಾಗಿ ಸಾಕಷ್ಟು ಹಕ್ಕುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಉಲ್ಲಂಘನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಜಿಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಮಲ್ಲಿಕಾರ್ಜುನ್ ಹೇಳಿದರು.
ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿ ಪಂ, ಹರಿಹರ ತಾ ಪಂ ಮತ್ತು ಜಿಗಳಿ ಗ್ರಾ ಪಂ ವತಿಯಿಂದ ಮಕ್ಕಳ ಹಕ್ಕುಗಳ ಕುರಿತು ಸುವರ್ಣ ಕರ್ನಾಟಕ ಜನ ಜಾಗೃತಿ ಕಲಾ ತಂಡದಿಂದ ಆಯೋಜಿಸಿದ್ದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆಯು ಎಲ್ಲರಿಗೂ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ಜಾರಿಗೆ ತಂದಿದೆ ಎಂದರು.
ಕಲಾ ತಂಡದ ನಾಯಕ ಜಿ. ಎನ್. ಹೇಮಂತ್, ಜಿಗಳಿ ರಂಗನಾಥ್, ಬಿ. ಎಚ್. ಉಮೇಶ್, ಲಿಂಗರಾಜ್, ಹಂಪಣ್ಣ, ದುರುಗೇಶ್, ಸುಲೋಚನಾ ಇವರು ನಾಟಕ ಮತ್ತು ಹಾಡುಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದರು.