ವಿಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ

ವಿಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ

ಭೌತ ಶಾಸ್ತ್ರದ ಕಾರ್ಯಾಗಾರ ಉದ್ಘಾಟಿಸಿದ ಬಿ.ಡಿ. ಕುಂಬಾರ

ದಾವಣಗೆರೆ, ಸೆ. 29- ವಿಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ, ಹಾಗಾಗಿ ಮಕ್ಕಳಲ್ಲಿ ವಿಜ್ಞಾನದ ಅಭಿರುಚಿ ಬೆಳೆಸುವ ಕಾರ್ಯ ಶಿಕ್ಷಕರಿಂದ ನಡೆಯಬೇಕು ಎಂದು ದಾವಣಗೆರೆ ವಿವಿಯ ಕುಲಪತಿ ಬಿ.ಡಿ ಕುಂಬಾರ ಹೇಳಿದರು.

ಡಿ.ಆರ್.ಎಂ ವಿಜ್ಞಾನ ಕಾಲೇಜು ಹಾಗೂ ದಾವಣಗೆರೆ ವಿವಿಯ ಸಹಯೋಗದಲ್ಲಿ ನಗರದ ಎ.ವಿ.ಕೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಯುಜಿ ಭೌತ ಶಾಸ್ತ್ರದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ಗುಣಮಟ್ಟದ ಶಿಕ್ಷಕರು ಹಾಗೂ ಪ್ರಾಯೋಗಿಕ ಕೊಠಡಿಯಲ್ಲಿ ಮೂಲ ಸೌಕರ್ಯದ ಕೊರತೆಯಿಂದಾಗಿ ವಿಜ್ಞಾನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಶಿಕ್ಷಣ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ವ್ಯವಸ್ಥೆ ಎಡವಿದೆ ಎಂದು ಹೇಳಿದರು.

ವಿಜ್ಞಾನ ಬೋಧಿಸುವ ಶಿಕ್ಷಕರು ಪೂರ್ವ ಸಿದ್ಧತೆಯೊಂದಿಗೆ ಮಕ್ಕಳಿಗೆ ಪಾಠ ಮಾಡಬೇಕು. ತರಗತಿಯಲ್ಲಿ ಕೇಳುವ ಚಿಕ್ಕ ಪುಟ್ಟ ಪ್ರಶ್ನೆಗಳಿಗೆ ಉತ್ತರಿಸಿ ಅವರ ಜ್ಞಾನ ಸಂಪತ್ತು ಅಭಿವೃದ್ಧಿಗೊಳಿಸುವ ಕಾರ್ಯ ಮಾಡಿದರೆ ಕಾಲೇಜಿನ ದಾಖಲಾತಿ ಹೆಚ್ಚಾಗಲಿದೆ ಎಂದರು.

ವಿಜ್ಞಾನ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರಿಂದ ಪ್ರತಿ 3 ವರ್ಷಕ್ಕೊಮ್ಮೆ ಪಠ್ಯಕ್ರಮ ಬದಲಾಯಿಸಬೇಕು ಮತ್ತು ಪಠ್ಯ ಬದಲಾಯಿಸುವಾಗ ಹಿರಿಯ ವಿದ್ಯಾರ್ಥಿಗಳ ಸಲಹೆ ಪಡೆಯುವುದು ಮುಖ್ಯ ಎಂದು ಹೇಳಿದರು.

ಇಂತಹ ಉಪನ್ಯಾಸ ಮಾಲಿಕೆ ನಡೆಯುವುದು ವಿರಳವಾಗಿದೆ. ಹಾಗಾಗಿ ಶೈಕ್ಷಣಿಕ ಉತ್ತೇಜನಕ್ಕಾಗಿ ಪ್ರತಿ 3 ತಿಂಗಳಿಗೊಮ್ಮೆ ಹಿರಿಯ ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳಿಂದ ಉಪನ್ಯಾಸ ಮಾಲಿಕೆ ನಡೆಸಬೇಕು ಎಂದು ಸಲಹೆ ನೀಡಿದರು.  ಈ ವೇಳೆ ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್‌, ಡಿಆರ್‌ಎಂ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಎಂ.ಪಿ. ರೂಪಶ್ರೀ, ಆರ್‌.ಆರ್.‌ ಶಿವಕುಮಾರ್‌, ಪ್ರಾಧ್ಯಾಪಕರಾದ ಶ್ರೀನಿವಾಸ್‌, ವಿನೋದ್‌ ಕುಮಾರ್‌, ಹನುಮಂತರಾಯ ಮತ್ತಿತರರಿದ್ದರು.

error: Content is protected !!