ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯದ್ದು

ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯದ್ದು

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಮತ

ದಾವಣಗೆರೆ, ಸೆ.1- ವಕೀಲರ ಸಂಘದ ವತಿಯಿಂದ ವಕೀಲ ಕೆ. ದಾದಾಪೀರ್ ಬರೆದಿರುವ ಲಾಯರ್ ರೆಡಿ ರೆಕ್‌ನರ್ ಪುಸ್ತಕ ಬಿಡುಗಡೆ ಸಮಾರಂಭವನ್ನು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ  ಏರ್ಪಡಿಸಲಾಗಿತ್ತು  

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ಪುಸ್ತಕ ಬಿಡುಗಡೆ ನೆರವೇರಿಸಿ ಮಾತನಾಡುತ್ತಾ, ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ನಮ್ಮ ಜೀವನದಲ್ಲಿ ಗುರಿಗಳನ್ನು ಸಾಧಿಸಲು ಪುಸ್ತಕಗಳು ಸರಿ ಹಾದಿಯಲ್ಲಿ ನಡೆಸುವುದರಿಂದ ಅವುಗಳಿಗೆ ಅಪಾರ ಪ್ರಾಮುಖ್ಯತೆ ಇದೆ ಎಂದು ಹೇಳಿದರು. 

ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯದ್ದಾಗಿದೆ. ಪುಸ್ತಕಗಳ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತೇವೆ ಹಾಗೂ ಲೋಕದ ಅಂದವನ್ನು ಪಡೆಯಲು ಅವಕಾಶವಾಗುತ್ತದೆ. ಪ್ರಪಂಚದ ಬಗ್ಗೆ ಹೊಸ ಮಾಹಿತಿ, ನೆಲದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳು ಸಹಾಯ ಮಾಡುತ್ತವೆ ಮತ್ತು ಜ್ಞಾನವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮತ್ತು ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಿಸಿದರು.

ಸಮಾರಂಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಲೇಖಕ ಕೆ. ದಾದಾಪೀರ್ ಮಾತನಾಡಿ, ಮೊಬೈಲ್‍ನಲ್ಲಿ ಗೂಗಲ್ ವಿಶ್ಲೇಷಣೆ ಬದಿಗಿಟ್ಟು, ಪುಸ್ತಕ ಓದುವ ಆನಂದ ಅನುಭವಿಸಿ, ಜ್ಞಾನ ಸಂಪನ್ನರಾಗ ಬೇಕೆಂದು ಯುವ ವಕೀಲರಿಗೆ ಸಲಹೆ ನೀಡಿದರು. 

ಆಳ ಅಧ್ಯಯನದಿಂದ ವಾಸ್ತವಾಂಶಗಳನ್ನು ಸರಿಯಾಗಿ ಮತ್ತು ಸುಲಲಿತವಾಗಿ ನ್ಯಾಯಾಲಯದಲ್ಲಿ ಮಂಡಿಸಿ, ಮನದಟ್ಟು ಮಾಡಲು ಕಾನೂನು ಪುಸ್ತಕಗಳ ಅಭ್ಯಾಸ ನಿರಂತರವಾಗಿರಬೇಕೆಂದು ತಿಳಿಸಿದರು. ತಮ್ಮ ಪುಸ್ತಕದಲ್ಲಿ 20 ಕೇಂದ್ರದ ಅಧಿನಿಯಮಗಳು ಹಾಗೂ ಕರ್ನಾಟಕದ ಅಧಿನಿಯಮಗಳ ಪರಿಚಯವಿದ್ದು, 222 ಪುಟಗಳ ಈ ಪುಸ್ತಕವನ್ನು ಬೆಂಗಳೂರಿನ ಪ್ರೀಮಿಯರ್ ಬುಕ್ ಹೌಸ್ ಪ್ರಕಟಿಸಿದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‍ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪುಸ್ತಕಗಳನ್ನು ನಮ್ಮನ್ನು ಒಂಟಿತನದ ಪ್ರಪಂಚದಿಂದ ಹೊರತರುವ ಅತ್ಯುತ್ತಮ ಒಡನಾಡಿಗಳಾಗಿವೆ. ಪುಸ್ತಕ ರಚನೆ ಒಂದು ರಚನಾತ್ಮಕ ಕ್ರಿಯೆ, ಒಂದು ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಜೀವನ ಮೌಲ್ಯವನ್ನು ತಿಳಿಯಲು ಪುಸ್ತಕಗಳು ಸಹಕಾರಿಯಾಗಿವೆ. ಪುಸ್ತಕಗಳಿಗೂ, ವಕೀಲರಿಗೂ ಅವಿನಾಭಾವ ಸಂಬಂಧವಿದ್ದು, ಅವಿಭಾಜ್ಯ ಅಂಗಗಳಾಗಿವೆ ಎಂದರು. 

ಕಾರ್ಯಕ್ರಮದಲ್ಲಿ ಲೇಖಕ ಕೆ.ದಾದಾಪೀರ್ ದಂಪತಿಯನ್ನು ಸಂಘದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. 

ಸಮಾರಂಭದ ವೇದಿಕೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್‍ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಟಿ.ಎಂ.ನಿವೇದಿತಾ ಉಪಸ್ಥಿತರಿದ್ದರು.

ನ್ಯಾಯಾಲಯದ ಸಿಬ್ಬಂದಿ ಅನಿತಾ ವಿ.ಟಿ.ಯವರಿಂದ ಪ್ರಾರ್ಥಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಕಾರ್ಯ ದರ್ಶಿ ಎಸ್.ಬಸವರಾಜ್ ನಿರೂಪಿಸಿದರು. ಸಹಕಾರ್ಯ ದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಆರ್. ಭಾಗ್ಯಲಕ್ಷ್ಮಿ, ಕೆ.ಎಂ.ನೀಲಕಂಠಯ್ಯ, ಜಿ.ಜೆ. ಸಂತೋಷ್ ಕುಮಾರ್, ಆರ್.ಚೌಡಪ್ಪ, ಎಲ್. ನಾಗರಾಜ್, ಟಿ.ಹೆಚ್. ಮದುಸೂಧನ್, ಕೆ.ಎಂ. ರಾಘವೇಂದ್ರ ಉಪಸ್ಥಿತರಿದ್ದರು.

error: Content is protected !!