ಪದ್ಮಶ್ರೀ ಚಿಂದೋಡಿ ಲೀಲಾ ಅವರ ನಿರ್ಮಾಣದ ಶ್ರೀ ಸೋಮೇಶ್ವರ ದೇವಸ್ಥಾನದ ನೂತನ ಪ್ರಸಾದ ನಿಲಯದ ಉದ್ಘಾಟನಾ ಕಾರ್ಯಕ್ರಮ
ದಾವಣಗೆರೆ, ಸೆ.1- ಹಸಿದವರಿಗೆ ಅನ್ನ ನೀಡುವ ಮೂಲಕ ದೇವರನ್ನು ಸಂತೃಪ್ತಿ ಗೊಳಿಸಲು ಸಾಧ್ಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಮಹಾಸ್ವಾಮೀಜಿ ಹೇಳಿದರು.
ನಗರದ ಚಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಭಾನುವಾರ ಪದ್ಮಶ್ರೀ ಚಿಂದೋಡಿ ಲೀಲಾ ಅವರ ನಿರ್ಮಾಣದ ಶ್ರೀ ಸೋಮೇಶ್ವರ ದೇವಸ್ಥಾನದ ನೂತನ ಪ್ರಸಾದ ನಿಲಯದ ಉದ್ಘಾಟನೆ, ಶ್ರೀ ಕರಿಬಸವೇಶ್ವರ ಸ್ವಾಮಿ ಪ್ರಸಾದ ನಿಲಯ ಹಾಗೂ 100 ಜನ ಜ ಂಗಮರ ಲಿಂಗ ಪೂಜೆ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಈಗ ಹಸಿವು ಮುಕ್ತ ರಾಜ್ಯಕ್ಕಾಗಿ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಹಸಿವು ಮುಕ್ತ ಸಮಾಜ ನಿರ್ಮಿಸಲು ದಾಸೋಹ ತತ್ವ ಆರಂಭಿಸಿದ್ದರು ಎಂದರು.
ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಪ್ರತಿ ದಿನವೂ ಲಕ್ಷಾಂತರ ಜಂಗಮರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಅದೇ ಪರಂಪರೆಯನ್ನು ಲಿಂಗಾಯತ ಮಠಗಳೂ ಮುಂದುವರೆಸಿಕೊಂಡು ಬಂದಿವೆ. ಅಷ್ಟೇ ಅಲ್ಲ, ಕೆಲವು ಲಿಂಗಾಯತ ಮನೆತನಗಳೂ ಅಂತಹ ಶ್ರೇಷ್ಠ ಕಾರ್ಯ ಪಾಲಿಸುತ್ತಾ ಬಂದಿವೆ. ಅವುಗಳಲ್ಲಿ ಚಿಂದೋಡಿ ಶಾಂತವೀರಪ್ಪ ಅವರ ಮನೆತನವೂ ಒಂದು ಎಂದು ಹೇಳಿದರು.
ನೂರು ವರ್ಷಗಳ ಹಿಂದೆಯೇ ಚಿಂದೋಡಿ ಮನೆ ತನದ ಶಾಂತವೀರಪ್ಪ ಹಾಗೂ ಶಾಂತಮ್ಮ ದಾಸೋಹ ಕಾರ್ಯ ಆರಂಭಿಸಿದ್ದರು. ಅಂದಿನ ಮುರುಘಾ ಮಠದ ಶ್ರೀ ಜಯದೇವ ಜಗದ್ಗುರುಗಳನ್ನು 1924ರಲ್ಲಿ ಆಮಂತ್ರಿಸಿ ಅವರಿಗೆ ಪಾದ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದು ಇತಿಹಾಸ.
ಅದೇ ಪರಂಪರೆಯನ್ನು ಚಿಂದೋಡಿ ಶಾಂತವೀರಪ್ಪ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ನಡೆಸಿಕೊಂಡು ಬರುವ ಮೂಲಕ ದೇವರಿಗೆ ತಮ್ಮ ನಿಜ ಭಕ್ತಿಯನ್ನು ಅರ್ಪಿಸುತ್ತಿರುವುದು ಶ್ಲ್ಯಾಘನೀಯ. ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಆಂಧ್ರ ಪ್ರದೇಶದ ಉರುಗಾದ್ರಿ ಗವಿಮಠ
ಸಂಸ್ಥಾನದ ಜಗದ್ಗುರು ಡಾ. ಕರಿಬಸವರಾಜೇಂದ್ರ ಸ್ವಾಮೀಜಿ, ಕುಮಾರಟ್ಟಣಂ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಚಿಂದೋಡಿ ಎಲ್.ಚಂದ್ರಧರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜ್ಞಾನೇಶ್ವರ ಜವಳಿ ನಿರೂಪಿಸಿದರು.