ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ
ಸಾಣೇಹಳ್ಳಿ, ಸೆ.1- ಹುಟ್ಟಿನಿಂದಲೇ ಲಿಂಗಾಯತ ಆಗುವುದಿಲ್ಲ. ಲಿಂಗ ಸಂಸ್ಕಾರದಿಂದ ಮಾತ್ರ ಯಾರು ಬೇಕಾದರೂ ಲಿಂಗಾಯತರಾಗ ಬಹುದು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಬಹುತೇಕ ಧರ್ಮದಲ್ಲಿ ಗುರು ಮತ್ತು ದೇವರಿದ್ದಾರೆ, ಜಂಗಮ ಇಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಜಂಗಮ ತತ್ವವಿದೆ. ಈ ಜಂಗಮರು ಅರಿವು, ಆಚಾರ ಹೊಂದಿದವರು ಮತ್ತು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುವರು ಎಂದರು.
12ನೇ ಶತಮಾನದ ಬಸವಣ್ಣ ತನ್ನ ಮೂಲ ಜನಿವಾರ ಸಂಸ್ಕೃತಿಯನ್ನು ಪ್ರಶ್ನಿಸಿ ಕೂಡಲಸಂಗ ಮದಲ್ಲಿ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡು, ದೇವರ ಹೆಸರಿನಲ್ಲಿ ಶೋಷಣೆಗೊಳಪಡಿಸುವ ಪೂಜಾರಿ ಮತ್ತು ಪುರೋಹಿತರಿಂದ ಜನರನ್ನು ರಕ್ಷಿಸಲು ಅಂಗೈಯಲ್ಲಿ ಇಷ್ಟಲಿಂಗ ಕರುಣಿಸಿದರು ಎಂದರು.
ಭಗವಂತ ಇಲ್ಲದಿರುವ ಜಾಗವೇ ಇಲ್ಲ. ನಮ್ಮೆಲ್ಲರ ಅಂತರಂಗದಲ್ಲಿ ಶಿವಚೈತನ್ಯವಿದೆ. ಅದನ್ನು ತೋರಿಸುವುದಕ್ಕೆ ಒಬ್ಬ ಗುರು ಬೇಕು ಎಂದು ತಿಳಿಸಿದರು.
ಇದೇ ವೇಳೆ 22 ಜನ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಪಡೆದುಕೊಂಡರು. ಹೆಚ್.ಎಸ್. ನಾಗರಾಜ ವಚನ ಗಾಯನ ಮಾಡಿದರು. ಸಿರಿಮಠ ಹಾಗೂ ರಮೇಶ್ ಪೂಜೆಯ ವ್ಯವಸ್ಥೆ ಮಾಡಿದರು. ಮುಖ್ಯೋಪಾಧ್ಯಾಯ ಬಿ.ಎಸ್. ಶಿವಕುಮಾರ್ ಇದ್ದರು.