ಜಗಳೂರು, ಆ. 29- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್)ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಪಟ್ಟಣದ ಮಹಾತ್ಮಗಾಂಧಿವೃತ್ತದ ಬಳಿ ಮಾನವ ಸರಪಳಿ ರಚಿಸಿ ನಂತರ ಬೆಸ್ಕಾಂ ಕಛೇರಿ ಮುಂಬಾಗದ ಜಮಾಯಿಸಿ ಬೆಸ್ಕಾಂ ಅಧಿಕಾರಿ ಅಭಿಷೇಕ್ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಚಿರಂಜೀವಿ ಸಿ.ಎಂ. ಹೊಳೆ ಮಾತನಾಡಿ,’ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆಯೊಂದಿಗೆ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವುದನ್ನು ಕೈಬಿಡಬೇಕು.
2023 ರ ತಿದ್ದುಪಡಿ ಕಾಯ್ದೆ ರದ್ದುಪಡಿಸಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಉಪಕರಣಗಳನ್ನು ಹಿಂದಿನಂತೆ ವಿತರಿಸಬೇಕು. ಸರ್ಕಾರ ಜಾರಿಗೊಳಿಸಿರುವ ಮನೆಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಗೆ ಯೂನಿಟ್ ವಿದ್ಯುತ್ ದರ ಹೆಚ್ಚಿಸಿರುವುದನ್ನು ಕಡಿಮೆಗೊಳಿಸಬೇಕು. ಸೋಲಾರ್ ಸಂಪರ್ಕ ಹೊಂದಿರುವ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ತಾಲ್ಲೂಕಿನ ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುವೆ. ತಮ್ಮ ಹೋರಾಟದ ಮನವಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲು ಸೂಚಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಪದಾಧಿಕಾರಿಗಳಾದ ಸಹದೇವ ರೆಡ್ಡಿ, ಗಂಗಾಧರಪ್ಪ, ಸತೀಶ್, ಶರಣಪ್ಪ, ಅನಿಲ್, ವೀರೇಶ್ ಕೆಂಚಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.