ಮಲೇಬೆನ್ನೂರು, ಆ. 12 – ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ನಾಡ ಕಛೇರಿ ಹಾಗೂ ಹಾಸ್ಟೆಲ್, ಶಾಲಾ-ಕಾಲೇಜುಗಳಿಗೆ ಹೋಗುವ ರಸ್ತೆ ಮಳೆ ಬಂದಾಗ ಕೆಸರಿನ ಗದ್ದೆಯಂತೆ ಆಗುತ್ತಿತ್ತು. ಇದರಿಂದಾಗಿ ಇಲ್ಲಿ ಓಡಾಡುವ ಜನರು ಮತ್ತು ವಿದ್ಯಾರ್ಥಿಗಳು ಎದ್ದು-ಬಿದ್ದು ಹಿಂಸೆ ಪಟ್ಟುಕೊಳ್ಳುತ್ತಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲೂ ವರದಿ ಆಗಿದ್ದವು. ಈ ಬಗ್ಗೆ ಪುರಸಭೆ ಗಮನ ಹರಿಸದಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಉಪ ತಹಶೀಲ್ದಾರ್ ಆರ್ ರವಿ, ಗ್ರಾಮ ಆಡಳಿತ ಅಧಿಕಾರಿ ಅಣ್ಣಪ್ಪ, ಕೃಷಿ ಅಧಿಕಾರಿ ಇನಾಯತ್ ಅವರುಗಳು ತಮ್ಮ ಸ್ವಂತ ಹಣದಲ್ಲಿ ಕೆಂಪು ಮಣ್ಣಿನ ಗ್ರಾವಲ್ ಅನ್ನು ರಸ್ತೆಗೆ ತಾತ್ಕಾಲಿಕವಾಗಿ ಹಾಕಿಸುವ ಮೂಲಕ ಮಾನವೀಯತೆ ಮೆರೆದರು. ಅಧಿಕಾರಿಗಳ ಈ ಕಾಳಜಿ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಂತ ಹಣದಲ್ಲಿ ರಸ್ತೆಗೆ ಗ್ರಾವಲ್ ಹಾಕಿಸಿದ ಅಧಿಕಾರಿಗಳು
