ಹರಿಹರದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್ ಶ್ಲ್ಯಾಘನೆ
ಎಸ್ಸೆಸ್ಸೆಲ್ಸಿ ಪಾಸಾಗಿದ್ದಕ್ಕೆ ತಂದೆ ಕೊಡಿಸಿದ ಸೈಕಲ್‌ನಲ್ಲಿ ನಂತರ ಪತ್ರಿಕೆಗಳ ವಿತರಣೆ ಮಾಡುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದ ಕೆ.ಪ್ರಭಾಕರ್ ಅವರು, ತಮ್ಮ ನಿರಂತರ ಶ್ರಮ, ಪ್ರಾಮಾಣಿಕತೆಯಿಂದಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.
– ಶಿವಾನಂದ ತಗಡೂರು, ರಾಜ್ಯಾಧ್ಯಕ್ಷ, ಕೆಯುಡಬ್ಲ್ಯೂಜೆ
ಹರಿಹರ, ಆ.11- ತಾಜಾ ಸುದ್ದಿ ಕೊಡುವ ಭರದಲ್ಲಿ ನೈಜತೆಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹರಿಹರ ತಾಲ್ಲೂಕು ಘಟಕ ನಗರದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಜಾ ಸುದ್ದಿ ಪ್ರಸಾರ ಮಾಡುವ ಮುನ್ನ ಸುದ್ದಿ ನಿಜವೋ – ಸುಳ್ಳೋ ಎಂದು ಖಾತರಿಪಡಿಸಿಕೊಳ್ಳಬೇಕು. ಒಂದು ಸುದ್ದಿ ಪ್ರಸಾರ ಮಾಡಿದ ನಂತರ ಸುಳ್ಳೆಂದು ಗೊತ್ತಾದರೂ ಬಂದೂಕಿನಿಂದ ಹೊರಟ ಗುಂಡು ವಾಪಸ್ ಪಡೆಯಲಾಗದೆನ್ನುವಂತೆ ಅದಕ್ಕೆ ಸ್ಪಷ್ಟನೆ ನೀಡುವತ್ತಲೂ ಗಮನಹರಿಸದಿರುವುದು ಬೇಸರದ ವಿಷಯ ಎಂದರು.
ಯುವ ಪತ್ರಕರ್ತರಿಗೆ ಅಧ್ಯಯನಶೀಲತೆ ಬೇಕು. ಅಧ್ಯಯನಶೀಲತೆ ಇರುವ ಪತ್ರಕರ್ತ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಬಲ್ಲ ಎಂದ ಅವರು, ಈ ಮುಂಚೆ ಅಭಿವೃದ್ಧಿ ನಂತರ ತನಿಖಾ ರಂಗವಾಗಿದ್ದು ನಂತರ ಜಾಹೀ ರಾತು ಪ್ರಭಾವಿತ ಪತ್ರಿಕೋದ್ಯಮವಾಗಿ ಪರಿವರ್ತನೆಯಾಗಿದೆ ಎಂದರು.
ಬಹುತೇಕ ನೈಜ ಪತ್ರಕರ್ತರು ಮನೆಗೆ ಮಾರಿ, ಊರಿಗೆ ಉಪಕಾರಿಯಾಗಿರುತ್ತಾರೆ. ಕುಟುಂಬದ ಸದಸ್ಯರ ಪೋಷಣೆ, ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪತ್ರಕರ್ತರ ಆರೋಗ್ಯ ಹದಗೆಟ್ಟರೆ ಅಥವಾ ಮೃತಪಟ್ಟರೆ ಕುಟುಂಬದವರಿಗೆ ತೊಂದರೆಯಾಗುತ್ತದೆ ಎಂದರು.
ಗಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಗೆ ವಾರ್ಷಿಕ 12 ಕೋಟಿ ರೂ. ವ್ಯಯವಾಗಲಿದೆ. ಆದರೆ, ಪತ್ರಕರ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾರಿಗೆ ನೀಡಬೇಕೆಂದು ನಿರ್ಣಯಿಸಲು ಕಷ್ಟವಾಗಿದೆ. ದಾವಣಗೆರೆಯಲ್ಲಿ ಪತ್ರಿಕಾ ಭವನ ನಿರ್ಮಾಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಹರಿಹರದ ಪತ್ರಕರ್ತರಿಗೆ ಲ್ಯಾಪ್‌ಟಾಪ್ ವಿತರಣೆ ಕುರಿತು ಸಂಬಂಧಿತರೊಂದಿಗೆ ಮಾತನಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನಾಧರಿಸಿದ ವಾಹಿನಿಗಳ ಹೆಸರಿನಲ್ಲಿ ಕೆಲವರು ಪತ್ರಕರ್ತರೆಂದು ಹೇಳುತ್ತಾ ನೈಜ ಪತ್ರಕರ್ತರ ಸ್ಥಾನಕ್ಕೂ ಕುತ್ತು ತರುತ್ತಿದ್ದಾರೆ, ನೈಜರಂತೆ ವೇಷ ಧರಿಸಿದ ನಕಲಿ ಪತ್ರಕರ್ತರೆ ನೈಜ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ದೊರಕಿಸುವಲ್ಲಿ ತೊಡಕಾಗಿ ಪರಣಿಮಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಎಸ್ಸೆಸ್ಸೆಲ್ಸಿ ಪಾಸಾಗಿದ್ದಕ್ಕೆ ತಂದೆ ಕೊಡಿಸಿದ ಸೈಕಲ್‌ನಲ್ಲಿ ನಂತರ ಪತ್ರಿಕೆಗಳ ವಿತರಣೆ ಮಾಡುವ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದ ಕೆ.ಪ್ರಭಾಕರ್ ಅವರು, ತಮ್ಮ ನಿರಂತರ ಶ್ರಮ ಹಾಗೂ ಪ್ರಾ ಮಾಣಿಕತೆಯಿಂದಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಪತ್ರಕರ್ತರ ಸಮಸ್ಯೆಗಳ ನಿವಾರಣೆಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದಾಗಿ ಪತ್ರಕರ್ತರಿಗೆ ಸ್ಪರ್ಧೆ ಇದ್ದು, ಅದನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಆದರೂ ಮುದ್ರಣ ಮಾಧ್ಯಮವೇ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದೆ. ಸರ್ಕಾರದಿಂದ ತಮ್ಮ ಶಿಫಾರಸ್ಸಿನಿಂದ ಕೊಡಮಾಡುವ ನಿವೇಶನ ಹಂಚಿಕೆ ಸಮಯದಲ್ಲಿ ಪತ್ರಕರ್ತರಿಗೂ ಆದ್ಯತೆ ನೀಡಲಾಗುವುದೆಂದು ಹೇಳಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ವೈದ್ಯರು, ವಕೀಲರಂತೆ ಪತ್ರಕರ್ತರ ರಕ್ಷಣೆಗೂ ಕಾಯ್ದೆ ಜಾರಿ ಮಾಡಿದರೆ ನೈಜ ಪತ್ರಕರ್ತರಿಗೆ ಅನುಕೂಲವಾಗುತ್ತದೆ. ನೆನೆಗುದಿಗೆ ಬಿದ್ದಿರುವ ನಿವೃತ್ತ ಪತ್ರಕರ್ತರಿಗೆ ನಿವೃತ್ತಿ ವೇತನ ನೀಡುವ ಯೋಜನೆ ಜಾರಿ ಮಾಡಬೇಕು. ದೂಡಾದಿಂದ ಹರಿಹರ – ದಾವಣಗೆರೆ ಪತ್ರಕರ್ತರಿಗೆ ವಸತಿ ಸೌಲಭ್ಯ ದೊರಕಿಸಬೇಕೆಂದು ಹೇಳಿದರು. ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ನಂದಿಗಾವಿ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀಮತಿ ಶಾಂಭವಿ ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಕಾರ್ಯದರ್ಶಿ ಜೆ.ಎಸ್. ವೀರೇಶ್, ನಿರ್ದೇಶಕ ಸಿ. ವೇದಮೂರ್ತಿ, ಹರಿಹರ ಘಟಕದ ಪದಾಧಿಕಾರಿಗಳಾದ ಶೇಖರ್ ಗೌಡ ಪಾಟೀಲ್, ಹೆಚ್.ಸುಧಾಕರ್, ಆರ್.ಮಂಜುನಾಥ್, ಮಂಜುನಾಥ್ ಪೂಜಾರ್, ಬಿ.ಎಂ.ಚಂದ್ರಶೇಖರ್, ಆರ್.ಬಿ.ಪ್ರವೀಣ್, ಚಿದಾನಂದ ಕಂಚಿಕೇರಿ, ಗಂಗನರಸಿ ಕುಮಾರ್, ಎಂ.ಎಸ್.ಆನಂದ್ ಕುಮಾರ್, ಸತೀಶ್ ನೋಟದವರ್, ವಿಶ್ವನಾಥ ಮೈಲಾಳ್, ಜಿ.ಎಂ.ಮಂಜುನಾಥ, ಮಲೇಬೆನ್ನೂರಿನ ದೇವರಾಜ್, ನಟರಾಜನ್, ರಾಮಶ್ರೇಷ್ಠಿ, ಸದಾನಂದ, ಶಿವಕುಮಾರ್, ಎಂ.ಬಿ.ಆಬಿದ್ ಅಲಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹರಿಹರ ಘಟಕ ಕಾರ್ಯದರ್ಶಿ ಹೆಚ್.ಸಿ.ಕೀರ್ತಿಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.