ದಾವಣಗೆರೆ, ಆ. 11- ಭದ್ರಾ ಜಲಾಶಯ ಕೂಡ ಸುರಕ್ಷತೆ ಹೊಂದಿಲ್ಲ. ಸುಮಾರು 62 ವರ್ಷಗಳ ಹಿಂದೆ ಗಾರೆ, ಕಲ್ಲು ಸುಣ್ಣ ಬಳಸಿ ಡ್ಯಾಂ ನಿರ್ಮಿಸಲಾಗಿ ಸಹಜವಾಗಿಯೇ ತಳಮಟ್ಟದಲ್ಲಿ ಸೋರಿಕೆಯಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮಧ್ಯರಾತ್ರಿ 12 ಗಂಟೆೆಗೆ ತುಂಗಭದ್ರಾ ಅಣೆಕಟ್ಟೆಯ 19 ನೇ ಕ್ರಸ್ಟ್ ಗೇಟ್ ತುಂಡಾಗಿ ಬಿದ್ದಿದ್ದು, ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ದಂಡೆಗಳಲ್ಲಿರುವ ಹಳ್ಳಿಗಳಿಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುವ ಸಂಭವವಿದೆ ಎಂದರು.
ಭದ್ರಾ ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಛೀಮಾರಿ ಹಾಕಿದ್ರೂ ಸಚಿವರುಗಳಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಧು ಬಂಗಾರಪ್ಪ ಅವರು ಎಚ್ಚೆತ್ತುಕೊಂಡಿಲ್ಲ. ಒಮ್ಮೆಲೇ ನದಿಗೆ ನೀರನ್ನು ವ್ಯರ್ಥವಾಗಿ ಹರಿಸಲಾಗುತ್ತಿದೆ. ಇದರಿಂದ ನದಿಯ ಆಸುಪಾಸಿನಲ್ಲಿರುವವರಿಗೆ ತೊಂದರೆಯಾಗುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲವಾಗಿದೆ ಎಂದು ಹೇಳಿದರು.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಕೆರೆ, ಕಟ್ಟೆಗಳಿಗೆ ಇಂದಿಗೂ ಒಂದು ಹನಿ ನೀರು ಬಂದಿಲ್ಲ. ನೀರು ಇದ್ದಾಗ ಕೆರೆ ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆ ಕನಿಷ್ಠ 300 ಎಕರೆ ಜಮೀನುಗಳಿಗೆ ನೀರುಣಿಸುತ್ತಿದೆ. ಕೆರೆಯ ಸುತ್ತ ಏಳೆಂಟು ಕಿ.ಮೀ. ದೂರ ಅಂತರ್ಜಲ ಮಟ್ಟ ಕುಸಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನೀರಿನ ಸೋರಿಕೆ ತಡೆಗಟ್ಟಬೇಕು. ಹಳೆಯದಾಗಿರುವ ಡ್ಯಾಂ ಗೇಟ್ಗಳನ್ನು ಸರಿಪಡಿಸುವ ಜೊತೆಗೆ ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂ ಸುತ್ತಲೂ ಬೇಲಿ ನಿರ್ಮಿಸಿ ಭದ್ರತೆ ಕಾಪಾಡಬೇಕೆಂದು ಮನವಿ ಮಾಡಿದರು.
ಜಲಾಶಯದ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಜಲಾಶಯ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ಜಲಾಶಯ ಸುರಕ್ಷತೆಗಾಗಿ ನೂರು ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯ ಸರ್ಕಾರ ಈ ನೂರು ಕೋಟಿಯನ್ನು ಬಿಡುಗಡೆ ಮಾಡಲಾರದೆ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಸುಮ್ಮನೇ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ. ಡ್ಯಾಂ ಉಳಿವಿಗಾಗಿ 100 ಕೋಟಿ ಬಿಡುಗಡೆ ಮಾಡಿ ಸುರಕ್ಷತೆ ಕಾಪಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಾದ ಆರನೇ ಕಲ್ಲು ವಿಜಯಕುಮಾರ್, ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು.