ಹರಪನಹಳ್ಳಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಾಮನಗೌಡ ಪಾಟೀಲ್
ಹರಪನಹಳ್ಳಿ, ಜು. 30- ನೈತಿಕ ಶಿಕ್ಷಣದಿಂದ ಮಾತ್ರ ಉನ್ನತ ಶಿಕ್ಷಣವನ್ನು ಪಡೆಯಲು ಸಾಧ್ಯ ಎಂದು ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಹೆಚ್.ಪಿ.ಎಸ್ ಪದವಿ ಮಹಾ ವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ’ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ನೈತಿಕ ಶಿಕ್ಷಣ ಪಡೆದು, ತಂದೆ-ತಾಯಿಗೆ ಗೌರವ ತರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಿದಾಗ ಮಾತ್ರ ಸೃಜನಶೀಲ ವ್ಯಕ್ತಿಯಾಗಿ ಬೆಳೆಯುವುದಕ್ಕೆ ಸಾಧ್ಯ ಮತ್ತು ಶಿಕ್ಷಕರು ಮತ್ತು ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ನಡೆದಾಗ ಒಳ್ಳೆಯ ಬೊಧನೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ವಕೀಲ ಎಂ.ಮೃತ್ಯುಂಜಯ ಅವರು ಮಾನವ ಸಾಗಾಣಿಕೆಯ ಬಗ್ಗೆ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಿನ ಜನ ಬಲಿಯಾಗುತ್ತಿದ್ದರು. ಆಧುನಿಕತೆ ಬೆಳೆದ ಹಾಗೆ ಅನೇಕ ಅಕ್ರಮ ವ್ಯವಹಾರಗಳು ನಡೆಯುತ್ತಿದ್ದು, ಅದನ್ನು ನಾವು ತಡೆಗಟ್ಟಬೇಕು ಎಂದರು.
1956ರಲ್ಲಿ ಮಾನವ ಕಳ್ಳಸಾಗಣೆ ಕಾಯ್ದೆ ಜಾರಿಗೆ ತರಲಾಯಿತು. ನಾಗರಿಕ ಸೇವೆಗಳಲ್ಲಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದಾಗ ಇಂತಹ ಘಟನೆಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಎಎಸ್ಐ ಬಿ.ನಿಂಗಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಕಿತ್ತು ತಿನ್ನುವ ಬಡತನವಿತ್ತು, ಆರ್ಥಿಕ ಪರಿಸ್ಥಿತಿ ಬಹಳ ದೊಡ್ಡಮಟ್ಟದಲ್ಲಿ ಹದೆಗೆಟ್ಟಿತ್ತು. ಅಂದು ಮಾನವರು ಸಂಕಷ್ಟದಲ್ಲಿದ್ದರು. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ತಂದೆ-ತಾಯಿಗಳು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು, ಆದರೆ ಈಗ ಆ ಕಾಲದ ಪರಿಸ್ಥಿತಿ ನಿರ್ಮಾಣ ಮಾಡಲು ಕಾನೂನಿನಲ್ಲಿ ಯಾವುದೇ ತರಹದ ಅವಕಾಶ ಇಲ್ಲ. ಈಗ ಕಠಿಣ ಕಾನೂನು ಬಂದಿದೆ. ಕಾನೂನಿನ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸ ಬೇಕು ಎಂದು ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಈರಣ್ಣ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಸಿ.ಪೀರ್ ಅಹಮ್ಮದ್, ಪ್ರಾಚಾರ್ಯ ಡಾ.ಮುತ್ತೇಶ ಎನ್., ವಕೀಲರಾದ ಸಿದ್ದೇಶ್ ಮತ್ತು ಬಿ. ತಿಪ್ಪೇಶ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೊಟ್ರೇಶ್, ಬಸವರಾಜ್ ಹಾಗೂ ಇತರರು ಹಾಜರಿದ್ದರು.