ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಅಲಕ್ಷ್ಯ ಮಾಡಿದರೆ ಬಿಲ್ಲುಗಳನ್ನು ತಡೆ ಹಿಡಿಸುವ ಎಚ್ಚರಿಕೆ ನೀಡಿದ ಶಾಸಕ

ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಅಲಕ್ಷ್ಯ ಮಾಡಿದರೆ ಬಿಲ್ಲುಗಳನ್ನು ತಡೆ ಹಿಡಿಸುವ ಎಚ್ಚರಿಕೆ ನೀಡಿದ ಶಾಸಕ

ರಾಣೇಬೆನ್ನೂರು, ಜು. 29 –  ಸ್ವಾತಂತ್ರ್ಯ ಬಂದಾಗ ಮನೆ ಕಟ್ಟಿಕೊಂಡಿದ್ದಾರೆ, ಪಕ್ಕಾ ರಸ್ತೆ ಗಳಾಗಿವೆ, ಮನೆಗಳಿಗೆ ವಿದ್ಯುತ್ ಸಂಪರ್ಕ ವಿದೆ, ಬೀದಿ ದೀಪಗಳಿವೆ, ಕುಡಿಯುವ ನೀರು ಸರಬರಾಜು ಇದೆ. ಆದರೆ, ಆ ಮನೆಗಳಿಗೆ ಮಾಲೀಕರ ಹೆಸರುಗಳೇ ಇಲ್ಲಾ!  ದಲಿತರಿಗಾಗಿ ಮೀಸಲಿಟ್ಟ ಈ ಜಾಗದಲ್ಲಿರುವವರೆಲ್ಲ ದಲಿತರೇ. ಕಳೆದ ಬಾರಿ ನಾನು ಶಾಸಕನಾಗಿದ್ದಾಗ ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ, ದಲಿತರ ಸಮಸ್ಯೆಯನ್ನ ಸರಿಪಡಿಸಬೇಕಿದೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಇಲ್ಲಿನ ತಾ.ಪಂ. ಸಭಾ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ, ತಮ್ಮ ಕ್ಷೇತ್ರಕ್ಕೆ ಬರುವ ರಾಣೇಬೆನ್ನೂರು ತಾಲ್ಲೂಕಿನ ಗ್ರಾಮಗಳ ಸಮಸ್ಯೆಗಳನ್ನು ಅಧಿಕಾರಿಗಳಿಂದ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೆನಕನಕೊಂಡ ಗ್ರಾಮದ ದಲಿತರ ನೋವಿನ ಸಂಗತಿಯನ್ನು ಪ್ರಸ್ತಾಪಿಸಿದರು.

ಈ ಬಗ್ಗೆ ತಹಶೀಲ್ಧಾರ್ ಹಾಗೂ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು ಮಾಡಿದ ಸಲಹೆಯನ್ನು  ಬದಿಗಿಟ್ಡು,  ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯ ಒಪ್ಪಿಗೆ ಪಡೆದು, ಆ ಜಾಗವನ್ನು ಹಾಗೂ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಅಳತೆ ಯನ್ನು ನಮೂದಿಸಿ, ಆ ಮನೆಗಳಲ್ಲಿರುವವರಿಗೆ ಹಕ್ಕುಪತ್ರಗಳನ್ನು ವಿತರಿಸಿ, ಈ ಕಾರ್ಯ ಒಂದು ತಿಂಗಳೊಳಗಾಗಿ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸದಾಸಕರು ಕಟ್ಟಪ್ಪಣೆ ಮಾಡಿದರು.

ಕೆರೆಮಲ್ಲಾಪುರದಲ್ಲಿರುವ ಮೇಲ್ ಚಾನಲ್‌ನ ನೀರು ಬಸಿಯುತ್ತಿದ್ದುದರಿಂದ ಗ್ರಾಮದ ಎಲ್ಲ ಮನೆಗಳು, ಗೋಡೆಗಳು ನೆನೆದು  ತನಿಸಿಯೇರಿವೆ. ಅಲ್ಲಿನ ಜನ ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡದಂತಾಗಿದೆ. ಕಾರಣ ಚಾನಲ್ ನೀರು ಬಸಿಯದಂತೆ ಕ್ರಮ, ಗುಡ್ಡದ ಬೇವಿನಹಳ್ಳಿ ಹಾಗೂ ಸುಣಕಲ್ಲು ಬಿದರಿ ಗ್ರಾಮಗಳ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ  ಕ್ರಮ  ಜರುಗಿಸಲು ಅಭಿಯಂತರರಿಗೆ ಶಾಸಕ ಬಸವರಾಜ ಶಿವಣ್ಣನವರ ಸೂಚನೆ ನೀಡಿದರು.

ತಮ್ಮ ಕ್ಷೇತ್ರದಲ್ಲಿನ ಎಲ್ಲ ಕೆರೆಗಳನ್ನು ತುಂಬಿಸಬೇಕು. ಅಲಕ್ಷ್ಯ ಮಾಡಿದರೆ ನಿಮಗೆ ಬರಬೇಕಾದ ಬಿಲ್ಲುಗಳನ್ನು ತಡೆ ಹಿಡಿಸುವ ಎಚ್ಚರಿಕೆ ನೀಡಿದ ಶಾಸಕರು ಇಲಾಖಾವಾರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಬಡವರನ್ನು, ರೈತರನ್ನು, ತುಳಿತಕ್ಕೊಳಪಟ್ಟವರನ್ನು  ಅಲೆದಾಡಿಸದೆ ಅವರ ಕೆಲಸ ಮಾಡಿಕೊಡಿ ಎಂದು ಸೂಚನೆ ನೀಡಿದರು. ವೇದಿಕೆಯಲ್ಲಿ ತಹಶಿಲ್ದಾರ್‌ ಗುರುಬಸವರಾಜ ಹಾಗೂ ಇ.ಓ. ಸುಮಲತಾ ಇದ್ದರು.

error: Content is protected !!