ಮಹಿಳಾ ಸಂತತಿ ಕ್ಷೀಣ..!
ಮಹಿಳಾ ಸಂತತಿ ಕ್ಷೀಣಿಸುತ್ತಿದೆ. ಭ್ರೂಣ ಹತ್ಯೆ, ಹೆಣ್ಣಿನ ಮಾರಾಟ, ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಮತ್ತು ಮರ್ಯಾದಾ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರಿಂದ 1000 ಪುರುಷರಿಗೆ 940 ಜನ ಮಹಿಳೆಯರು ಇದ್ದಾರೆ.
– ಡಾ. ಕೆ. ಷರೀಫಾ., ಸಾಹಿತಿ.
ದಾವಣಗೆರೆ, ಜು.26- ತೊಟ್ಟಿಲು ತೂಗುವ ಕೈಗೆ ದೇಶ ಆಳುವ ಶಕ್ತಿ ಇದೆ. ಆದ್ದರಿಂದ ಮಹಿಳೆ ತನ್ನ ಸ್ವತಂತ್ರದ ವಿಚಾರದಲ್ಲಿ ಕುಗ್ಗದೇ ಕಡ್ಡಾಯವಾಗಿ ಶಿಕ್ಷಣ ಪಡೆದರೆ ಮಹಿಳಾ ಸಬಲೀಕರಣ ಆಗಬಹುದು ಎಂದು ಸಾಹಿತಿ ಡಾ.ಕೆ. ಷರೀಫಾ ತಿಳಿಸಿದರು.
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ `ಮಹಿಳಾ ಸಬಲೀಕರಣ ಮತ್ತು ಮೀಸಲಾತಿ’ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು.
ದೇಶದಲ್ಲಿ ಪುರುಷ ಪ್ರಧಾನತೆ ಆವರಿಸಿಕೊಂಡಿದ್ದರಿಂದ ಮಹಿಳೆಯ ಸರ್ವ ಸ್ವತಂತ್ರ ಹಿನ್ನಡೆ ಸಾಧಿಸಿದೆ. ಈ ನಿಟ್ಟಿನಲ್ಲಿ ಮಹಿಳೆಯೂ ಬೌದ್ಧಿಕ ಮತ್ತು ದೈಹಿಕವಾಗಿ ಆಹಾರದ ವಿಚಾರದಲ್ಲಿ ತನ್ನ ಹಕ್ಕು ಕಾಪಾಡಿಕೊಳ್ಳಲು ಧ್ವನಿಯೆತ್ತಬೇಕಿದೆ ಎಂದರು.
ಜಾತಿ ಮತ್ತು ಧರ್ಮದ ವಿಚಾರದಲ್ಲಿ ಮಹಿಳೆಯರನ್ನು ಮೌಢ್ಯದಲ್ಲಿ ಮುಳುಗಿಸಿದ್ದಾರೆ. ಇದರಿಂದ ಮಹಿಳೆಯರು ಜಾಗೃತರಾಗಿ ಸ್ವನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರದಿಂದ ಮಹಿಳೆಯರಿಗಾಗಿ ಸಾಕಷ್ಟು ಸವಲತ್ತು ಮತ್ತು ಕಾನೂನುಗಳಿದ್ದರೂ ಮಹಿಳಾ ಶೋಷಣೆ ಹಾಗೂ ಸಿಗಬೇಕಾದ ಸವಲತ್ತುಗಳು ಸ್ತ್ರೀ ಕೈಗೆ ಸೇರುವಲ್ಲಿ ವಿಫಲವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ಗಿಮಿಕ್‌ನಲ್ಲಿ ಮಹಿಳಾ ಮೀಸಲಾತಿ ಸಿಲುಕಿದೆ. ಜನಗಣತಿ ಹಾಗೂ ಕ್ಷೇತ್ರವಾರು ವಿಂಗಡಣೆ ಮಾಡದಿದ್ದರೆ ರಾಜಕೀಯ ಸಬಲೀಕರಣದಿಂದ ನಾರಿಯು ಸಂಪೂರ್ಣವಾಗಿ ಹಿಂದೆ ಉಳಿಯುತ್ತಾಳೆ ಎಂದು ಹೇಳಿದರು.
ಲಿಂಗ ಸಮಾನತೆ ಸಾಧಿಸುವ ಜತೆಗೆ ಅಧಿಕಾರ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸ್ವತಂತ್ರ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಮಹಿಳಾ ಶಕ್ತಿ ತೋರಿಸುವ ಮೂಲಕ ಸ್ತ್ರೀ ಸಬಲೀಕರಣ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಟಿ.ಎ. ಕುಸಗಟ್ಟಿ, ಪ್ರೊ. ಪದ್ಮಾ ಟಿ. ಚಿನ್ಮಯಿ, ನಿವೃತ್ತ ಉಪನ್ಯಾಸಕ ಲಿಂಗರಾಜ್ ಜೋಗಿಹಳ್ಳಿ, ಪ್ರಾಧ್ಯಾಪಕರಾದ ಶಂಷುದ್ಧಿನ್ ಖಾನ್, ಅರುಣಾ ಕುಮಾರಿ, ಅನ್ನಪೂರ್ಣ ಪಾಟೀಲ್, ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಸೋನು ಇದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೆ.ಎಚ್. ಪಟೇಲ್ ಫೌಂಡೇಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಇವರ ಸಂಯುಕ್ತಾಶ್ರ ಯದಲ್ಲಿ ಕಾರ್ಯಕ್ರಮ ನಡೆಯಿತು.