ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯಕ್ರಮದಲ್ಲಿ ಯರಗುಂಟೆಯ ಗುರು ಕರಿಬಸವೇಶ್ವರ ಗದ್ದುಗೆ ಮಠದ ಪರಮೇಶ್ವರ ಶ್ರೀಗಳ ಕಿವಿಮಾತು
ದಾವಣಗೆರೆ, ಜು.24- ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದೊಂದಿಗೆ ಆದರ್ಶ ವ್ಯಕ್ತಿತ್ವ ರೂಪಿಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಕಾಣಬೇಕು ಎಂದು ಯರಗುಂಟೆಯ ಗುರು ಕರಿಬಸವೇಶ್ವರ ಗದ್ದುಗೆ ಮಠದ ಪರಮೇಶ್ವರ ಶ್ರೀಗಳು ಹೇಳಿದರು.
ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಆಶ್ರಯದಲ್ಲಿ ನಗರದ ರೋಟರಿ ಬಾಲ ಭವನದಲ್ಲಿ ಈಚೆಗೆ ನಡೆದ ಬಸಾಪುರದ ರೇವಣಸಿದ್ದೇಶ್ವರ ಪ್ರೌಢ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸಿದಾಗ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದ ಅವರು, ಮಕ್ಕಳು ಉತ್ತಮ ಸಂಸ್ಕಾರ ಕಲಿಯಬೇಕು ಎಂದು ಹೇಳಿದರು.
ಇಂದಿನ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದರಿಂದ ದೇಸಿ ಕಲೆ ಕಣ್ಮರೆಯಾಗುತ್ತಿವೆ. ಆದ್ದರಿಂದ ಇಂತಹ ಸ್ಥಿತಿಗೆ ಕಡಿವಾಣ ಹಾಕುವ ಮೂಲಕ ಮಕ್ಕಳು ಸಂಸ್ಕೃತಿಯತ್ತ ಮನ ಪರಿವರ್ತಿಸಿಕೊಳ್ಳಬೇಕು ಮತ್ತು ರಂಗ ಕಲೆ ಉಳಿಸಿ-ಬೆಳೆಸಲು ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಸಾ.ಶಿ.ಇ. ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸ್ಪೂರ್ತಿ, ಚೈತನ್ಯ ತರುವುದಲ್ಲದೇ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೂ ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ಇದೇ ವೇಳೆ ಗ್ರಾಮೀಣ ರಂಗ ಕಲಾವಿದರಿಗೆ `ಗ್ರಾಮೀಣ ಕಲಾಚೇತನ’ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿದರು.
ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ, ಸಾಹಿತಿ ಎಚ್. ಕೆ. ಸತ್ಯಭಾಮ, ರೇವಣಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಕೆ.ಜಿ. ಸೌಭಾಗ್ಯ, ಬಸವ ಬಳಗದ ದೇವಿಗೆರೆ ಗಿರೀಶ್, ಸಾಹಿತಿ ಎಚ್.ಎನ್. ಶಿವಕುಮಾರ್, ಅಕ್ಕಮಹಾದೇವಿ ಸಂಘದ ಎಸ್.ಜಿ. ಶಾಂತಾ ಇದ್ದರು.
ಸಂಘದ ಅಧ್ಯಕ್ಷ ಎನ್.ಎಸ್. ರಾಜು ಸ್ವಾಗತಿಸಿದರು. ಕಾರ್ಯದರ್ಶಿ ಎ. ಸುರೇಗೌಡ ವಂದಿಸಿದರು. ವಾಣಿಶ್ರೀ ಗದಗ ನಿರೂಪಿಸಿದರು.