ರಾಣೇಬೆನ್ನೂರು, ಜು.19- ಕಳೆದೆರಡು ದಿನಗಳಿಂದ ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ ತುಂಬಿ ತುಳುಕಾಡುತ್ತಿದೆ. ಹಾಗಾಗಿ ಕೆರೆಗೆ ಹಾರವಾದ ನೆರೆಯ ರಟ್ಟಿಹಳ್ಳಿ ತಾಲ್ಲೂಕಿನ ಐತಿಹಾಸಿಕ ಮದಗದ ಕೆಂಚಮ್ಮನ ಕೆರೆ ಮೈದುಂಬಿಕೊಂಡಿದೆ. ಕೋಡಿ ಮೂಲಕ ಕುಣಿದು ಕುಪ್ಪಳಿಸುತ್ತಾ ಬಂದ ಕುಮದ್ವತಿ ತನ್ನ ನೆಚ್ಚಿದ ಜನರ ಮನದುಂಬಿಸಿದ್ದಾಳೆ.
ರಟ್ಟಿಹಳ್ಳಿ ತಾಲ್ಲೂಕಿನ ಕೋಡಮಗ್ಗಿ, ತಿಪ್ಪಾಯಿ ಕೊಪ್ಪ, ಮಾಸೂರು, ಚಿಕ್ಕಮೊರಬ, ಹಿರೇಮೊರಬ, ರಟ್ಟಿಹಳ್ಳಿ, ತೋಟಗಂಟಿ ಹಾಗೂ ರಾಣೇಬೆನ್ನೂರು ತಾಲ್ಲೂಕಿನ ಚಿಕ್ಕಮಾಗನೂರು, ಹಿರೇಮಾಗನೂರು, ಕುಪ್ಪೇಲೂರು, ನಂದಿಹಳ್ಳಿ, ಲಿಂಗದಹಳ್ಳಿ ಸೇರಿದಂತೆ 28 ಗ್ರಾಮಗಳ ಜನರ ಬರಡಾಗಬಹುದಿದ್ದ ಬದುಕು ಚಿಗುರೊಡೆದಿದೆ. ಕಳೆಗುಂದಿದ್ದ ಮುಖಗಳೀಗ ಕಳೆಗಟ್ಟಿವೆ. `ಮಾಯದಂತ ಮಳೆ ಬಂತಣ್ಣಾ, ಮದಗಾದ ಕೆರೆಗೆ’ ಎನ್ನುವ ಹಾಡೀಗ ಗುನುಗುಡುತ್ತಿದೆ.