ದಾವಣಗೆರೆ, ಜು. 19- ಒತ್ತಡ ಮುಕ್ತ ಜೀವನವನ್ನು ನಡೆಸುವ ಮಾರ್ಗೋಪಾಯಗಳನ್ನು ತಿಳಿದುಕೊಂಡು ಮುನ್ನಡೆದರೆ ಮಾತ್ರ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಪಟಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ನಗರದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾರಲ್ಲಿ ಮಾನಸಿಕ ಕಿರಿಕಿರಿ, ನಿವೇದನೆ, ಚಿಂತೆ, ವ್ಯಥೆ, ನಕಾರಾತ್ಮಕ ಆಲೋಚನೆ ಇರುತ್ತದೆಯೋ ಅಂಥ ವರು ಮಾನಸಿಕ ಆರೋಗ್ಯ ಸಹಾಯವಾಣಿ 14416ಕ್ಕೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ ಹಾಗೂ ಪ್ರತಿಯೊಂದು ಸರ್ವೇಯಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸುವ ಕೆಲಸವಾಗಲಿ ಮತ್ತು ಮಾನಸಿಕ ಅಸ್ವಸ್ಥರನ್ನು ಮುಖ್ಯವಾಹಿನಿಗೆ ತರುವಲ್ಲಿ ಆಶಾಕಾರ್ಯ ಕರ್ತೆಯರ ಪಾತ್ರ ಮುಖ್ಯ ಎಂದರು.
ಮಾನಸಿಕ ಕಾಯಿಲೆಯೂ ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆ, ಅನುವಂಶೀಯತೆ, ಒತ್ತಡದಿಂದ ಬರುವಂತಹದ್ದಾಗಿದೆ. ಯಾವುದೇ ದೆವ್ವ- ಭೂತ, ಮಾಟ- ಮಂತ್ರ, ಪೂರ್ವಜನ್ಮದ ಪಾಪದಿಂದ ಬರುವಂತದ್ದಲ್ಲ, ಈ ರೀತಿಯ ಮೂಢನಂಬಿಕೆಗೆ ಒಳಗಾಗಿ ಯಾವುದೇ ತರಹದ ಅಹಿತಕರ ಘಟನೆಗಳನ್ನು ಮಾಡಿಕೊಳ್ಳದಿರಲು ಜನಸಾಮಾನ್ಯರಿಗೆ ತಿಳಿಸಿ ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.
ಹಿರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿಕುಮಾರ್, ಆಶಾ ಮೇಲ್ವಿಚಾರಕರಾದ ಸುರೇಖಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಷಿಯಲ್ ವರ್ಕರ್ ಎಂ.ಸಂತೋಷ್ ಕುಮಾರ್ ಉಪಸ್ಥಿತರಿದ್ದರು.