ಇಂದು ಕನ್ನಡಿಗ ಮೀಸಲಾತಿಯಾದರೆ, ನಾಳೆ `ಅಹಿಂದ’ ಮೀಸಲಾತಿಯಲ್ಲಿ ಸಂಶಯವಿಲ್ಲ
ರಾಜ್ಯದಲ್ಲಿ `ಮತ್ತೆ’ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರಲು ಚಿಂತನೆಗಳು ನಡೆದಿವೆ. ಮತ್ತೆ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ, ಭಾರತದಲ್ಲಿ ಸಾವಿರಾರು ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿತ್ತು. ನಿರ್ದಿಷ್ಟ ಜಾತಿಗಳು ನಿರ್ದಿಷ್ಟ ವೃತ್ತಿಯಲ್ಲೇ ತೊಡಗಬೇಕು ಎಂದು ಮನುವಾದದ ಕಟ್ಟಳೆ ಇತ್ತು. ಈ ಕಟ್ಟಳೆಗೆ ಕರ್ಮ ಸಿದ್ಧಾಂತವನ್ನು ಜೋಡಿಸಲಾಗಿತ್ತು.
ಇತ್ತೀಚಿನ ದಶಕಗಳಲ್ಲಿ ಈ ಜಾತಿ ಮೀಸಲಾತಿ ತೊಲಗಿ, ಖಾಸಗಿ ವಲಯದ ಹುದ್ದೆಗಳು ಎಲ್ಲರಿಗೂ ಮುಕ್ತವಾಗಿದ್ದವು. ಸಮಾಜವಾದಿ ಹೆಗ್ಗಳಿಕೆಯ ಸರ್ಕಾರ ಈಗ ಮತ್ತೆ ಖಾಸಗಿಯಲ್ಲಿ ಮೀಸಲಾತಿ ಜಾರಿಗೆ ತರಲು ಹೊರಟಿದೆ. ಈ ಬಾರಿ ಜಾತಿ ಮುಂದಿಟ್ಟಿಲ್ಲ, ಕನ್ನಡಿಗರು ಅಥವಾ ಸ್ಥಳೀಯರು ಎಂಬ ಪದ ಮುಂದಿಡಲಾಗಿದೆ.
ಶತಮಾನದ ಹಿಂದೆ ಮೈಸೂರು ಸಂಸ್ಥಾನದಲ್ಲೂ ಮೊದಲು ಸ್ಥಳೀಯರಿಗೆ ಮೀಸಲಾತಿ ನೀಡಲಾಗಿತ್ತು. ನಂತರ ಹಿಂದುಳಿದ ವರ್ಗಗಳ ಮೀಸಲಾತಿ ಬೇಕೆಂಬ ಬೇಡಿಕೆ ಜಾರಿಯಾಗಿತ್ತು. ಈ ಬಾರಿಯೂ, ಕನ್ನಡಿಗ/ಸ್ಥಳೀಯರಿಗೆ ಮೀಸಲಾತಿ ಜಾರಿಗೆ ಬಂದರೆ, ಮುಂಬರುವ ದಿನಗಳಲ್ಲಿ `ಅಹಿಂದ’ ಮೀಸಲಾತಿ ಬೇಡಿಕೆ ಖಂಡಿತಾ ಬಂದೇ ಬರಲಿದೆ.
ಸಮಾಜವಾದಿ ಸಿದ್ಧಾಂತ ಹಾಗೂ ಸರ್ಕಾರೀಕರಣದ ಮೂಲಕ ಭವ್ಯ ಭಾರತವನ್ನು ಕಟ್ಟುತ್ತೇವೆ ಎಂದು ಸ್ವಾತಂತ್ರ್ಯ ದೊರೆತ ಆರಂಭದ ದಶಕಗಳಲ್ಲಿ ಹೇಳಲಾಗಿತ್ತು. ಆದರೆ, ಭಾರತ ಭವ್ಯವಾಗುವ ಬದಲು ಬಡವಾಗಿಯೇ ಉಳಿದಿತ್ತು.
1991ರಲ್ಲಿ ಪಿ.ವಿ. ನರಸಿಂಹ ರಾವ್ ಎಂಬ ಮಹಾನುಭಾವ ಭಾರತದಲ್ಲಿ ಮುಕ್ತ ಆರ್ಥಿಕ ವ್ಯವಸ್ಥೆ ಜಾರಿಗೆ ತಂದಿದ್ದರು. ನಂತರ ದೇಶದ ಜನತೆ ಖಾಸಗಿ ವಲಯದ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿ ಭಾರತವನ್ನು ವಿಶ್ವದ ಮುಂಚೂಣಿ ದೇಶಗಳ ಸಾಲಿಗೆ ತಂದಿದ್ದಾರೆ.
ಖಾಸಗಿ ವಲಯದ ನಾಗಾಲೋಟಕ್ಕೆ ಕಡಿವಾಣ ಹಾಕಿ ಮತ್ತೆ ಸಮಾಜವಾದ ಜಾರಿಗೆ ತರಬೇಕು ಎಂದು ಕೆಲವರು ಆಗಾಗ ಆಲಾಪನೆ ಮಾಡುತ್ತಿರುತ್ತಾರೆ. ಬಹುಶಃ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತಂದರೆ ಅದಕ್ಕಿಂತ ದೊಡ್ಡ ಕಡಿವಾಣ ಬೇರೊಂದಿಲ್ಲ.
ಮೀಸಲಾತಿ ತಪ್ಪಲ್ಲ. ಆದರೆ, ಅದನ್ನು ಜಾರಿಗೆ ತರುವ ವಿಧಾನದಲ್ಲಿ ಮಾತ್ರ ಸಿಕ್ಕಾಪಟ್ಟೆ ಲೋಪಗಳಿವೆ. ಉದಾಹರಣೆಗೆ : ಮೇಲ್ಜಾತಿ ಹಾಗೂ ಮೇಲ್ವರ್ಗದವರಿಗೆ ಮೀಸಲಾತಿ ಅಗತ್ಯವೇನಿದೆ? ಆದರೆ, 371ಜೆ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಮೇಲ್ಜಾತಿ ಹಾಗೂ ಮೇಲ್ವರ್ಗದವರಿಗೂ ಮೀಸಲಾತಿ ಸಿಗುತ್ತಿದೆ! ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೇಲ್ವರ್ಗ ಹಾಗೂ ಮೇಲ್ಜಾತಿಯವರಿಗೆ ಮೀಸಲಾತಿ ನೀಡಲಾಗುತ್ತಿದೆ.
ಬಹುರೂಪಿ, ಸರ್ವವ್ಯಾಪಿ ಮೀಸಲಾತಿ
ಮೀಸಲಾತಿ ಕೇವಲ ಭಾರತಕ್ಕೆ ಸೀಮಿತವಲ್ಲ. ಅಮೆರಿಕದಿಂದ ಹಿಡಿದು ಪಕ್ಕದ ಬಾಂಗ್ಲಾದೇಶದವರೆಗೆ ಮೀಸಲಾತಿ ಸರ್ವವ್ಯಾಪಿಯಾಗಿದೆ.
ಅಮೆರಿಕದಲ್ಲಿ ಡಿ.ಇ.ಐ. (ವಿಭಿನ್ನತೆ, ಸಮಪಾಲು ಹಾಗೂ ಒಳಗೊಳ್ಳುವಿಕೆ) ಆಧಾರದ ಮೇಲೆ ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಲಾಗುತ್ತಿದೆ. ಇತ್ತೀಚೆಗಂತೂ ಅಮೆರಿಕದ ಶಿಕ್ಷಣ, ಟೆಕ್, ಮಾಧ್ಯಮ ಸೇರಿದಂತೆ ಎಲ್ಲ ವಲಯಗಳಲ್ಲಿ ಡಿ.ಇ.ಐ. ಪರಿಣಿತರನ್ನು ನೇಮಿಸಿಕೊಳ್ಳಲಾಗಿದೆ. ಇವರು ನೇಮಕ ಹಾಗೂ ಬಡ್ತಿಯಲ್ಲಿ ಮೀಸಲಾತಿ ಜಾರಿಗೆ ತರುವುದಕ್ಕೆ ನೆರವಾಗುತ್ತಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಇದೆ. ಕನಿಷ್ಠ 6 ಸ್ಥಾನಗಳನ್ನು ಬಿಳಿಯರಲ್ಲದವರಿಗೆ ಮೀಸಲಿಡಲಾಗಿದೆ.
ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ಕುಟುಂಬದವರಿಗೆ ಮೀಸಲಾತಿ ಇದೆ. ಈ ಮೀಸಲಾತಿ ರದ್ದುಗೊಳಿಸಲು ಅಲ್ಲಿ ಹಿಂಸಾತ್ಮಕ ಹೋರಾಟ ನಡೆಯುತ್ತಿರುವುದು ಇತ್ತೀಚಿನ ವಿದ್ಯಮಾನ.
ಇಷ್ಟು ಸಾಲದು ಎಂಬಂತೆ, ಮೀಸಲಾತಿಯಲ್ಲಿ ಒಳ ವರ್ಗಗಳನ್ನು ರೂಪಿಸಲಾಗಿದೆ. ನಾವು ಆ ವರ್ಗಕ್ಕೆ ಹೋಗೋಣ, ಈ ವರ್ಗಕ್ಕೆ ಹೋಗೋಣ ಎಂದು ಹೋರಾಟಗಳು ನಡೆಯುತ್ತಿವೆ. ಖಾಸಗಿ ವಲಯದಲ್ಲಿಯೂ ಜಾತಿ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಇದ್ದೇ ಇದೆ. ಒಂದು ವೇಳೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿಗೆ ಬಂದರೆ, ಜಾತಿ ಮೀಸಲಾತಿ ಬೇಡಿಕೆಗೆ ಪೂರ್ಣ ಬಲ ಸಿಕ್ಕೇ ಸಿಗುತ್ತದೆ. ಆಗಂತೂ ಪರಿಸ್ಥಿತಿ ಇನ್ನಷ್ಟು ಹದಗೆಡುವುದರಲ್ಲಿ ಸಂಶಯವಿಲ್ಲ.
ಸರ್ಕಾರಿ ಮೀಸಲಾತಿ ಕುರಿತ ಕಾನೂನು ಹೋರಾಟಗಳು ನಿತ್ಯ ನಡೆಯುತ್ತಿವೆ. ಮುಂದೆ, ಖಾಸಗಿ ವಲಯವೂ ಮೀಸಲಾತಿಯಿಂದಾಗಿ ಕಾನೂನು ತೊಡಕಿ ನಲ್ಲಿ ಸಿಲುಕಿಕೊಳ್ಳಲಿದೆ. ಸರ್ಕಾರಿ ಕಚೇರಿಗಳಿಗೆ ಅಲೆ ಯುವ ಹಾಗೂ ಕೋರ್ಟುಗಳ ಕೇಸುಗಳಲ್ಲಿ ಸಿಲುಕುವ ಸಮಸ್ಯೆ ಎದುರಿಸಲು ಖಾಸಗಿ ವಲಯ ಸಿದ್ಧವಾಗಿದೆಯೇ?
ಮೀಸಲಾತಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳು ಈಗಾಗಲೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ಮೀಸಲಾತಿ ಸ್ವರೂಪ ಬದಲಿಸಲು ಹಾತೊರೆಯುತ್ತಿರುತ್ತವೆ. ಇದೆಲ್ಲವನ್ನೂ ಖಾಸಗಿ ವಲಯದ ಮೇಲೆ ಹೇರಿದರೆ ಅದರ ಗತಿ ಏನಾಗಬೇಕು?
ಸರ್ಕಾರ ಬೃಹತ್ ಸಂಸ್ಥೆಯಾಗಿರುವ ಕಾರಣ, ಮೀಸಲಾತಿಯ ಎಲ್ಲ ತೊಡಕುಗಳನ್ನು ಎದುರಿಸಬಹುದು. ಅಲ್ಲದೇ ಸರ್ಕಾರಿ ಹುದ್ದೆಗೆ ಸೇರಿದವರಲ್ಲಿ ಬಹುತೇಕರು ನಿವೃತ್ತಿಯವರೆಗೂ ಅಲ್ಲೇ ಇರುತ್ತಾರೆ. ಖಾಸಗಿ ವಲಯ ಹಾಗಲ್ಲ. ನಿರಂತರವಾಗಿ ಉದ್ಯೋಗಿಗಳು ಬದಲಾಗುತ್ತಾರೆ. ಹೀಗಾಗಿ ಖಾಸಗಿ ವಲಯದಲ್ಲಿ ಮೀಸಲಾತಿ ಪರಿಣಾಮ ಸರ್ಕಾರಿ ವಲಯಕ್ಕಿಂತ ತೀವ್ರವಾಗಿರಲಿದೆ.
ಎಲ್ಲಕ್ಕೂ ಮುಖ್ಯ ಎಂದರೆ, ಮೀಸಲಾತಿಯ ಬಗ್ಗೆ ಸಮರ್ಪಕ ಚರ್ಚೆಯಾಗಬೇಕಿದೆ. ವೋಟ್ ಬ್ಯಾಂಕ್ ಚಡಪಡಿಕೆಯ ರಾಜಕೀಯ ಪಕ್ಷಗಳು ಮೀಸಲಾತಿ ಬಗ್ಗೆ ಸದನದಲ್ಲಿ ಸಮರ್ಪಕ ಚರ್ಚೆ ನಡೆಸುವುದು ಅನುಮಾನ. ಸಂಪುಟದಲ್ಲಿ ಸಮರ್ಪಕ ಚರ್ಚೆ ನಡೆಸದೇ ಖಾಸಗಿ ವಲಯದ ಮೀಸಲಾತಿ ಬಗ್ಗೆ ಪ್ರಕಟಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಉದ್ಯಮಗಳನ್ನು ಬೆಳೆಸಲು ಹಾಗೂ ಉದ್ಯೋಗ ಸೃಷ್ಟಿಸಲು ಸರ್ಕಾರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕಿದೆ. ಕುಡಿಯುವ ನೀರಿನ ಕನಿಷ್ಠ ಅಗತ್ಯಕ್ಕಾಗಿ ಬೆಂಗಳೂರು ಕಳೆದ ಬೇಸಿಗೆಯಲ್ಲಿ ಚಡಪಡಿಸಿತ್ತು. ಸಾರಿಗೆ ಸೌಲಭ್ಯ, ವಸತಿ, ಆರೋಗ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಿ, ಜನರಿಗೆ ಕೌಶಲ್ಯ ಕಲಿಸಿದರೆ ಉದ್ಯೋಗಾವಕಾಶ ತಾನಾಗಿಯೇ ಸೃಷ್ಟಿಯಾಗುತ್ತದೆ. ಇದೆಲ್ಲದರ ಕಡೆ ಯೋಚಿಸಲು ರಾಜಕೀಯ ಪಟ್ಟಭದ್ರರಿಗೆ ಪುರುಸೊತ್ತಿದೆಯೇ?
– ಬಿ.ಜಿ. ಪ್ರವೀಣ್ ಕುಮಾರ್, ದಾವಣಗೆರೆ