ಸಾಸ್ವೆಹಳ್ಳಿ, ಜು.19- ಹೋಬಳಿಯ ಎರಡು ಕಡೆ ಮಳೆ, ಗಾಳಿಗೆ ಮರಗಳು ನೆಲಕ್ಕುರುಳಿದ ಪರಿಣಾಮ ಎರಡು ಭಾಗದಲ್ಲಿ 7 ವಿದ್ಯುತ್ ಕಂಬಗಳು ಧರೆಗುರುಳಿ 15 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ಸಾಸ್ವೇಹಳ್ಳಿ ಬೆಸ್ಕಾಂನ ಜೆ.ಇ ಕಾಂತರಾಜ್ ಎಲ್ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದ ವೇಳೆ ಹನುಮನಹಳ್ಳಿ ಕುಳಗಟ್ಟೆ ನಡುವೆ ಹಾದು ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ (ಎಫ್ 5)ದಲ್ಲಿ ಎರಡು ಮರಗಳು ವಿದ್ಯುತ್ ವೈರಿನ ಮೇಲೆ ಬಿದ್ದಿದ್ದರಿಂದ 5 ಕಂಬಗಳು ಹಾಗೂ ಹುಣಸಘಟ್ಟದ ಸಮೀಪ ಹನಗವಾಡಿ ಮಾರ್ಗವಾಗಿ ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ (ಎಫ್ 10) ರಲ್ಲಿಯು ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ 2 ಕಂಬಗಳು ನೆಲಕ್ಕುರುಳಿವೆ ಎಂದರು.
ಈ ಎರಡೂ ಮಾರ್ಗಗಳ ವಿದ್ಯುತ್ ಕಂಬ ನೆಲಕ್ಕುರುಳಿದ ಪರಿಣಾಮ ಹನುಮನಹಳ್ಳಿ, ಕುಳಗಟ್ಟೆ, ಕ್ಯಾಸಿನಕೆರೆ, ಭೈರನಹಳ್ಳಿ, ಚನ್ನೇನಹಳ್ಳಿ ಹಾಗೂ ಹುಣಸಘಟ್ಟ, ಹೊಸಹಳ್ಳಿ, ಲಿಂಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ ಎಂದರು.
ರಾತ್ರಿಯ ವೇಳೆಗೆ ತಾತ್ಕಾಲಿಕ ಪರಿಹಾರ ಒದಗಿಸಿ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ನಮ್ಮ ಲೈನ್ ಮೆನ್ ಗಳು ಕಲ್ಪಿಸಿದರು ಎಂದು ತಿಳಿಸಿದರು.