ಡೆಂಘಿ : ಪ್ರತಿ ಶುಕ್ರವಾರ ವಿಶೇಷ ಲಾರ್ವಾ ಸಮೀಕ್ಷೆ

ಡೆಂಘಿ : ಪ್ರತಿ ಶುಕ್ರವಾರ ವಿಶೇಷ ಲಾರ್ವಾ ಸಮೀಕ್ಷೆ

ಎಲ್ಲಾ ಇಲಾಖೆ, ಸಂಸ್ಥೆಯವರು ನಿಯಂತ್ರಣದ ಎಸ್.ಓ.ಪಿ ಅನುಸರಿಸಲು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ  ಸೂಚನೆ

ದಾವಣಗೆರೆ, ಜು. 12 – ರಾಜ್ಯದಲ್ಲಿ ಡೆಂಘಿ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿದ್ದು, ಮಳೆಗಾಲ ವಾಗಿರುವುದರಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಇದರ ನಿಯಂತ್ರಣಕ್ಕೆ ಸಮುದಾಯ ಸಹಕಾರದ ಜೊತೆಗೆ ಎಲ್ಲಾ ಇಲಾಖೆ, ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಡೆಂಘಿ ನಿಯಂತ್ರಣದ ಎಸ್.ಓ.ಪಿ. ಅನುಸರಿಸಲು ಮತ್ತು ಪ್ರತಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿರುವ ವಿಶೇಷ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆಯಲ್ಲಿ ಕೈಜೋಡಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಜಂಟಿ ಹೇಳಿಕೆಯಲ್ಲಿ ಕೇಳಿಕೊಂಡಿದ್ದಾರೆ.

ಡೆಂಘಿ ಮತ್ತು ಚಿಕನ್‍ಗುನ್ಯಾಗಳಿಗೆ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇರುವುದಿಲ್ಲ. ಇದು ಈಡೀಸ್ ಸೊಳ್ಳೆ ಕಚ್ಚುವುದರಿಂದ ಅದರಲ್ಲಿಯೂ ಹಗಲು ಸಮಯದಲ್ಲಿ ಇದು ಕಚ್ಚುತ್ತದೆ. ಇದರ ನಿಯಂತ್ರಣಕ್ಕಾಗಿ ಸೊಳ್ಳೆಗಳ ಸಂತಾನ ಹೆಚ್ಚಳವಾಗದಂತೆ ನಿಯಂತ್ರಣ ಮಾಡುವುದೇ ಇದಕ್ಕೆ ಪರಿಹಾರೋಪಾಯ ವಾಗಿದೆ. ಸಮುದಾಯ ದವರು ಮನೆಯ ಒಳಗೆ, ಹೊರಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೊಟ್ಟಿಗಳನ್ನು ಸರಿಯಾಗಿ ಮುಚ್ಚುವ ಮೂಲಕ ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಮನೆಯ ಹೊರಗೆ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳು, ಬಸ್ ಡಿಪೋಗಳು, ವಾಣಿಜ್ಯ ಸಂರ್ಕೀಣಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ನೀರಿನ ಶೇಖರಣೆಯಾಗದಂತೆ ಮತ್ತು ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಂಡು ಅವುಗಳಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. 

 ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳು ಹೆಚ್ಚು ದರ ಪಡೆಯುವಂತಿಲ್ಲ;   ಖಾಸಗಿ ಪ್ರಯೋಗಾಲಯಗಳು ಡೆಂಘಿ ಪರೀಕ್ಷೆಗಾಗಿ ದುಪ್ಪಟ್ಟು ದರ ಪಡೆಯಲಾಗುತ್ತಿದೆ ಎಂದು ದೂರಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ದರ ನಿಗದಿ ಮಾಡಿದೆ. ಡೆಂಘಿ ಪರೀಕ್ಷೆಯನ್ನು ಎಲಿಸಾ ಎನ್‍ಎಸ್1, ಐಜಿಎಂ ಪರೀಕ್ಷೆಗೆ ರೂ.300 ಹಾಗೂ ರಾಪಿಡ್ ಕಾರ್ಡ್ ಟೆಸ್ಟ್‍ಗೆ ರೂ. 250 ಮಾತ್ರ ಪಡೆಯಬೇಕು. 

ಆಸ್ಪತ್ರೆಗಳಲ್ಲಿ ದಾಖಲಾಗುವ ಶಂಕಿತ ಡೆಂಘಿ ಪ್ರಕರಣಗಳ ಚಿಕಿತ್ಸೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ನಿರ್ವಹಣೆ ಮಾಡಬೇಕು. ಆಸ್ಪತ್ರೆ ಆವರಣ, ಲ್ಯಾಬ್‍ಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ವಾರ್ಡ್‍ಗಳಲ್ಲಿ ರೋಗಿಗಳಿಗೆ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.  

ಸಾರ್ವಜನಿಕರ ಸಹಭಾಗಿತ್ವ : ಸೊಳ್ಳೆಗಳು ಉತ್ಪತ್ತಿಯಾಗದಂತೆ ಸಿಮೆಂಟ್ ತೊಟ್ಟಿ, ಬ್ಯಾರೆಲ್, ಮಡಿಕೆ, ಏರ್‍ಕೂಲರ್, ಹೂ ಕುಂಡ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ವಸ್ತುಗಳು ಹಾಗೂ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗಂತೆ ನೋಡಿಕೊಳ್ಳಬೇಕು. ತೊಟ್ಟಿಯಲ್ಲಿ ನೀರು ಸಂಗ್ರಹಿಸುವಾಗ ಕಡ್ಡಾಯವಾಗಿ ಮುಚ್ಚಿರಬೇಕು. ವಾರಕ್ಕೊಮ್ಮೆ  ಸ್ವಚ್ಚಗೊಳಿಸಿ ಉಪಯೋಗಿಸ ಬೇಕು. ಡೆಂಘಿ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

Click here to change this text

error: Content is protected !!